ಬುಧವಾರ, ಜೂನ್ 26, 2013

ರವಿಬೆಳೆಗೆರೆಯವರ ''ಕವಿರಾಜಮಾರ್ಗವಲ್ಲ ಇದು ಕಾಮರಾಜಮಾರ್ಗ ''ಪುಸ್ತಕ ನಾನು ಇತ್ತೀಚಿಗೆ ಓದಿದ್ದು ,ನೆಮ್ಮದಿ ನಿದ್ದೆ ಎರಡನ್ನು ಕೆಡಿಸಿ ತಲೆ ಬಿಸಿ ಕೊಟ್ಟ ಪುಸ್ತಕ .ಕಾಮಾತಿರೇಕದಲ್ಲಿ ಮುಳುಗೆದ್ದ ರಾಜಕಾರಣವನ್ನ ಬಿಂಬಿಸುವ ಯಾವುದೋ ನೈಜರೂಪಗಳಿಗೆ ಹತ್ತಿರವಾದ ಬರಹವಿದು .ಸಂಕೋಚದಲ್ಲಿ ಹತ್ತು ಸಲ ಮುಚ್ಚಿಟ್ಟು ಓದಿಸಿಕೊಂಡರೂ ,ಕ್ರಿಯಾಶೀಲತೆಯನ್ನು ಉಳಿಸಿಕೊಂಡ ಈ ರಾಜಕೀಯ ಪಲ್ಲಟದ ಕಾದಂಬರಿ ಅದರದೇ ಆದ ವಿಶಿಷ್ಟತೆ ಹೊಂದಿದೆ .ಸಾಕು ತಂದೆಯ ಕಾಮವಿಕಾರಕ್ಕೊಳಗಾದ ಆದರ್ಶದ ಹುಡುಗಿ ಶುಭಾ ಪುನಃ ಲೈಂಗಿಕ ಶೋಷಣೆಯಲ್ಲಿ ಸಿಲುಕಿ ಅದೇ ಜೀವನದಿಂದ ಅಧಿಕಾರಕ್ಕೆ ಬರುವುದು ನಮ್ಮ ವ್ಯವಸ್ಥೆಯ ವಿಕಾರ . ಮೋಹಕ್ಕಾಗಿ ನರ್ಸಿನ ಹಿಂದೆ ಬಿದ್ದು ಸರ್ವನಾಶವಾದ ರಾಜಕಾರಣಿ ,ರಾಜಕಾರಣದ ಜನರ ಹಿಂದೆ ಬಿದ್ದ ಬೆಂಬಲಿಗರು ,ಹಲವು ಖಾಸಗಿ ಬದುಕಿನ ಅನೈತಿಕ ಎಳೆಗಳು ಎದೆ ಕುಗ್ಗಿಸಿ ಹೀಗಾಗಬಾರದು ಎಂಬ ರೋಷ ತರುತ್ತದೆ . ಪ್ರಶ್ನೆಯಾಗುವ ದೇಶದ ರಾಜಕಾರಣ ಹೊಲಸಲ್ಲಿ ಹೊರಳಿ ನರಳುತ್ತದೆ . 
ಎದೆಯ ಒಳಗನ್ನು ಬಗೆದು ನಿಜವಾಗಿ ನಮ್ಮದೆಯ ಸಂಸ್ಕಾರವನ್ನ ಚೂರಿಯಲ್ಲಿ ಇರಿದು ಪ್ರಶ್ನಿಸುವ ಲೇಖಕ ,ಸಮಾಜದ ಕಳೆ ಕೊಳೆಗಳ ನಾರುವಿಕೆ ದಾಟಿ ಬಾಳುವ ಸನ್ನಡತೆಗೆ ಪ್ರಶ್ನೆ ಹಾಕುತ್ತಾನೆ .ಬರವಣಿಗೆಯ ಸೊಗಸು ,ಚಾತುರ್ಯ ,ಕಥಾವಸ್ತುವಿಗೆ ದೊರೆತಿರುವ ಸಾಮರ್ಥ್ಯ ,ಹಿಡಿತ ಓದುಗನಲ್ಲಿ ಪುಸ್ತಕ ಕೆಳಗಿಡಲಾಗದ ಕುತೂಹಲ ಓದುವಾತುರ ಸೃಷ್ಟಿಸುತ್ತದೆ . 

ರವಿ ಬೆಳೆಗೆರೆ 
ಭಾವನಾ ಪ್ರಕಾಶನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ