ಬುಧವಾರ, ಜುಲೈ 24, 2013

ಚಕ್ರಗಳ ಚಕ್ರಾದಿಪತ್ಯದಲಿ ಬಸವಳಿದ ಸರಳ ಮನವೇ
ಕೊಡವಿಬಿಡು ನಿನ್ನ ಸೆಳೆದಾಟವನ್ನ ,ಧ್ಯಾನಗಳಿಲ್ಲದೇ
ಹೋರಾಟದಲ್ಲಿ ಬದುಕ ಗೆದ್ದ ವೇದ ತಿಳಿಯದ ವೀರರ ಬಲ್ಲೆ
ತಿಳುವಳಿಕೆಯ ಹುಚ್ಚಲಿ ಮರೆಯದಿರು ವಾಸ್ತವ .
ಬಡಿದ ಭತ್ತದ ಹೊಟ್ಟಿನಲು ಹಾರು ಗಾಳಿಯ ಬಿರುಸಿಗೆ
ನಾನು ಪರೀಕ್ಷೆ,ಬುದ್ದಿಮತ್ತೆಯಲಿ ,ಹತ್ತು ಸಾರಿ ಎಡವಿದ್ದರೂ
ನಿನ್ನ ಮುಖ ಪುಸ್ತಕದ ಗೆಳೆತನಕ್ಕೆ ಅವಮಾನವಿಲ್ಲ
ಕಲೆ ಕಿರೀಟಗಳ ಜoಭದಲಿ ಹಿಗ್ಗದಿರು
ನಾನು ಏನೂ ಅಲ್ಲ -ಖಾಲಿ ಚಿತ್ರ -ಬರಿಗಾಲ ಪಯಣಿಗಳು
ಬೇಡವಾದರೆ ಬಿಟ್ಟು ಬಿಡು ನನ್ನ ಪೆದ್ದಳೆoದು .
ಗರಿಕೆ ಹುಲ್ಲಿಗೆ ಒಲಿದ ಗಣಪನೇ
ನಿನ್ನ ಸರಳತೆಗೆ ಸೋತಿದ್ದೇನೆ
ಇಷ್ಟ ಬಂದಂತೆ ಮುದ್ದಿಸಿದರೆ ನಿನಗೆ ಉಸಿರು ಕಟ್ಟುವುದೆಂಬ ಹದರಿಕೆ ಮಗುವೆ ,
ಗೆಳೆಯ ನೀನು ಸಾರ್ವಭೌಮ

ಬದುಕಿನೆಲ್ಲಾ ನೆನಪ ಚಿತ್ರಗಳು ಸುಂದರವಾಗಿರಬೇಕಾಗಿಲ್ಲ
ನಿನ್ನೊಳಗೆ ಖೇದ ಉoಟು ಮಾಡುವಷ್ಟು ಕೆಟ್ಟದಿಲ್ಲದ್ದಿದ್ದರೆ ಸರಿ ,
ಗಗನ ಮುಟ್ಟಿದ ಪ್ರತಿ ಉತ್ಸಾಹದ ಹಿತ ನಿನ್ನನ್ನು ಇಂದೂ ಅಪ್ಪುವುದೇ
ಬಿಡು ನಾಳಿನ ಬೆಳಗ... , ಕ್ಷಣ ಕ್ಷಣ ನೀ ಮಾಡುವುದೆಲ್ಲ ಸಾರ್ಥಕ ಸೇವೆ .

ಮೆಚ್ಹಲಾರದು ಜಗ ಸಚ್ಹರಿತೆಯ ಕೂಗು ಹೊಡೆದಾಟಗಳನ್ನ
ಅವರಭ್ಯಾಸ ಹೂ- ಹಾರಗಳು ,ಹೊಗಳು- ಭಾಷಣಗಳು
ಹಿಡಿ ನಿನ್ನ ಕತ್ತಿ ತರಿದು ಬಿಡು ಅನ್ಯಾಯಗಳ ನಿನಗೆ ನೀನೆ ಪ್ರಾಣಸಖ
ತಿರುಗಿ ನೋಡದಿದ್ದರೂ ಕೋಟಿ ಮೆಚ್ಹುಗೆ ಕಂಗಳು ಸದಾ ನಿನ್ನತ್ತ .....

ಹುಟ್ಟು ಹಬ್ಬದ ಶುಭಾಷಯಗಳು .
ಆಷಾಡ ಶುಕ್ರವಾರ

ಮುತ್ತೈದೆ ಪೂಜೆಗೆ ಸಕಲ ಸಿದ್ದತೆ ಜರುಗಿ ಚಳಿ ಕಳೆದು
ದೀಪದ ಬೆಚ್ಚನೆ ಬೆರಗು ಮಕ್ಕಳ ಕೆನ್ನಯಲಿ ಪ್ರತಿಫಲಿಸಿ
ಕಾಯಿ ಫಲ ತಾoಬೂಲ ರವಿಕೆ ಕಣ ಮಡಿಲಕ್ಕಿ ಸೇರಿ
ಅರಸಿನ ಕುಂಕುಮ ಬಳೆಯ ತಟ್ಟೆ ಮಣೆಯ ಮಡಿಲೇರಿತು

ನಾಳೆ ಮುಂಜಾವಿಗೆ ರಂಗೋಲಿಯ ಹೊಸ ಹಸೆ
ತುಪ್ಪದ ಘಮಿಸುವ ಪೊಂಗಲ್ ಸವಿ ನೈವೇದ್ಯ
ಸರಸರನೆ ಶಬ್ದಿಸುವ ರೇಷ್ಮೆಗೆ ,ಗೆಜ್ಜೆಯ ಜೊತೆ ರಾಗ
ಲಕ್ಸ್ಮಿಗೆ ಪೂಜಾ ವೈಭವ ,ಶ್ಲೋಕದೊಡನೆ ದೀಪ ನಮಸ್ಕಾರ

ಹಿರಿಯ ಮುತ್ತೈದೆ ಸಾವಿನ ನೆನಪಿನ ಆಶೀರ್ವಾದದ ಪೂಜೆ
ಕಿರಿಯರೆಲ್ಲರ ತಲೆ ಬಾಗಿ ,ಹಣೆಗೆ ಕುಂಕುಮ ರಕ್ಷೆ
ಮನೆಗೆ ಮಗುವಿತ್ತ ಸಂತಾನ ಲಕ್ಷ್ಮಿಗೆ ಪುನರ್ನಮನ
ವರುಷ ವರುಷವೂ ನೀನು ಪೂಜೆಗೊಂಡು ಹರಸು ಎಲ್ಲರನೂ
ಏಕೋ
ಎದೆಯೊಳಗೆ ಸೇರಿ ಏಕೆ ತೊಳಲಾಡುತ್ತಿ ಹುಡುಗಾ ನೀ
ಸೇರಬೇಕಾದ ಕಡೆ ಬೆಚ್ಹಗೆ ಹೊಕ್ಕಾಯಿತು ಇನ್ನೇನು ಹುಡುಕಾಟ ?
ಓ ಉಸಿರು ಕಟ್ಟುತ್ತಿದೆಯಾ ಈ ಬಿಸಿ ಪ್ರೀತಿಯಲ್ಲಿ
ತಿರುಗಾಡಬೇಕೇನೋ ಹೋಗಿಬಾ ಅವರಿವರ ಹೃದಯದೊಳಗೆ

ಬೇಸರವಾಗುತ್ತಿಯಲ್ಲ ?ನಿನ್ನೆದುರೇ ಕೂತರೆ ಜೀವನ ಸಾಗದು ಎಂದು ,
ಹುಡುಗಿ ನಕ್ಕಾಗ ದಿನಗಟ್ಟಲೇ ಹೃದಯ ನರ್ತಿಸಿದ್ದು ಧೀರ್ಘ ಚoಡೆಮದ್ದಲೆ
ಈಗ ಹಸೀ ಮೌನ ,ಹುಸಿ ನಗು, ಜೀವನ ನಡೆಸಬೇಕೆಂಬ ಬಿಗುಮಾನ
ಪ್ರೀತಿ ಹೆಚ್ಹಿದಷ್ಟೂ ,ತಪ್ಪುಗಳ ಒಪ್ಪಬಲ್ಲದು-ಹೃದಯ ಸರಿ ಗದ್ದುಗೆ ಸರಿಯದಿರಿನ್ನು ...... ....
ಕುಂಕುಮಕ್ಕೆ ಬಂದ ಹೂಗಳು

ಆರತಿಗೆ ಅಕ್ಷತೆಯ ಬೆರಳಲ್ಲಿ ಹಿಡಿದ ಹೂವಂತ ಹೆಂಗಳೆಯರು
ಕೋಮಲ ಕರಗಳಲಿ ಸದ್ಗುಣಗಳ ಪ್ರಾರ್ಥನೆಯಿರಿಸಿ
ಎಲ್ಲರ ಅರೋಗ್ಯ ,ಸಂಪತ್ತು,ಸೌಭಾಗ್ಯಕ್ಕಾಗಿ ಬೇಡಿದರು
ಹೂಮಾಲೆಯ ಮೆದುವಿಗೆ ,ಆರತಿಯ ಹಾಡಿಗೆ ಮನ ಕಣ್ತುಂಬಿತು

ಸಪ್ತವರ್ಣದ ಸೆರಗಲಿ ಮಡಿಲಕ್ಕಿಯ ಹಿಡಿ ತುಂಬಿ ಚಿಟಿಕೆಯುಳಿಸಿ ,
ಕೆನ್ನೆಗೆ ಅರಸಿನ ,ಹಣೆಗೆ ಕುಂಕುಮ ,ಬೆರಳ್ತುದಿಗೆ ಶ್ರೀಗಂಧ ಮುಟ್ಟಿಸಿ
ಬಾಗಿ ನಮಿಸಿಎದ್ದವರು ನಗುವುದೆಷ್ಟು ಸೊಗಸು ,ಸುರಿವುದು ಸಿರಿ ಸಂಪತ್ತು
ಹೆಣ್ಣುಮಕ್ಕಳ ಪಾದದರಸಿನದ ಚೆಲುವಿಗೆ ಸೋತಿತು ಎಲ್ಲರ ಮನಸು

ಸೆರಗ ಹಿಂದಿನ ಚಿಣ್ಣರ ಸಿಹಿತಿಂಡಿಯ ಬದಿಯ ಚಕ್ಕುಲಿ ಆಹಾ ಸವಿ
ಗಾಜಿನ ಬಳೆಯ ಝಣತ್ಕಾರದಲಿ ಎಲೆ ಅಡಿಕೆಯೊಳಗಿನ ಖರ್ಜೂರ ,
ಪೂರ್ಣಫಲ ತುಂಬು ತೇಜಸ್ಸು ,ಸಕಲಲೈಶ್ವೈರ್ಯ ಪೂಜಾ ಶ್ರೇಯಸ್ಸು
ಅಕ್ಷತೆಯಿರಿಸಿ ಹೂದಳಗಳನೇರಿಸಿ ,ಮುಡಿಗೆ ಮಲ್ಲಿಗೆ ಪಡೆದು ಫಲಾಹಾರ

ಪ್ರಸಾದ ಸೇವೆಯಲಿ,ಪಾದ ನಮಸ್ಕಾರದಲಿ ,ಪುಟ್ಟವರ ಕಲರವದಲಿ
ಮನೆ ತುಂಬಾ ಪಾಯಸದ ಘಮ ,ಓಡಾಟಗಳ ಸಡಗರ
ಪೂಜೆಯ ಪುಷ್ಪ ಅಲಂಕಾರಗಳಲಿ ಮನಸು ತೃಪ್ತಿ ಸಾಗರ
ದಿನವಿಡೀ ಉರಿವ ಕಿರುದೀಪದಲಿ ,ಮನಸ ಮಂದಹಾಸ ದೈವ ಸಾಕ್ಷಾತ್ಕಾರ
ನಿನಗೂ ನನಗೂ ನಡುವೆ ನಮ್ಮದಲ್ಲದ ಮಾತು ಜಾಸ್ತಿಯಾಗಿ
ಅಪರಿಚಿತರಾದೆವೋ ಎಂಬ ಚಿಂತೆ ,ಎದೆಯಲಿ ನೋವಿನಂತೆ
ಮಳೆ
ಸೋನೆ ಮಳೆಗೆ ಬೆಚ್ಚನೆ ಮಾತಾಡಿದ ಮೇಲೆ
ಸುರಿವ ಹೆಂಚಿನ ಕೆಳಗೆ ಪಾತ್ರೆಗಳಿರಿಸಿದ ಜೀವ
ಬೆಳ್ಳಂಬೆಳ್ಳಗ್ಗೆ ನಡುಗುತ್ತಾ ಬಂದಾಗ ,ನನಗೋ
ಮಳೆ ಸುಂದರ ಕಾವ್ಯವಾಗಿರದೇ ,ಮುಗಿಲ ಕಂಬನಿಯ
ಹರಿದ ಸ್ವೆಟರಿನೊಳಗಿನ ಕೊರಗಿನ ಕಥೆಯೆನಿಸಿ
ಇಬ್ಬರೂ ಕಾಫಿ ಹಂಚಿಕೊಂಡಾಗ ಕೊಂಚ ಹಿತ
ನೆನ್ನೆ ಪ್ರಥಮೇಕಾದಶಿ
ಇಂದು ದ್ವಾದಶಿ
ನನ್ನೆದೆಗೇಕೋ
ದಿನವೂ ಹುಣ್ಣಿಮೆ
ದಟ್ಟ ಅಮಾವಾಸ್ಯೆಯಲ್ಲೂ
ನಿನ್ನ ನೆನೆದಾಗಲೆಲ್ಲಾ
ಚೆಲ್ಲಿದ ಬೆಳದಿಂಗಳ
ತುಂಬಲಿಕ್ಕೆ ನಕ್ಷತ್ರಗಳ
ನೇಮಿಸಿದ್ದೇನೆ
ನೀ ಮಳೆಗೆರೆವ
ಮುತ್ತುಗಳ ಹೆಕ್ಕಿ
ಹನಿಗಣ್ಣಾಗಲಿಕ್ಕೂ
ಅರ್ಪಣೆಗೆ ಕಾದ ಕ್ಷಣ ಕ್ಷಣವೂ ಕರಗಿ ಹೋಗಿ
ನಾನಿದ್ದೂ ನಾನಿಲ್ಲದ ಖಾಲಿ ಜಾಗದಲ್ಲಿ ನಿಂತೆ ,ಸರಿದೆ
ನಾನಿದ್ದದ್ದು ನಿನಗೆ ಗೊತ್ತೇ ? ನಾನು ಅಲ್ಲಿರಲಿಲ್ಲ
ನಿನ್ನೆದೆಯ ಒಳಗೆ ಒರಗಿಕೊಂಡಿದ್ದೆ
ನಿನ್ನ ಮುದ್ದಾದ ಮೂಗು ಕಂಡಾಗಲೆಲ್ಲಾ
ಕಂಪಿಸುವೆದೆ ಹಿಡಿದು ಕಣ್ಣು ಮುಚ್ಹುತ್ತೇನೆ
ಚೂಪು ನಕ್ಷತ್ರದ ಕಂಗಳು ,ಸೂರ್ಯನಂತೆ ಹೊಳೆವಾಗ
ಕಂಗಾಲಾಗುತ್ತೇನೆ ಬಿಸಿ ತಾಳದೇ
ತುಟಿಯ ನಗು ಅದರ ಅಧರ ಸೌoದರ್ಯವ
ಮುಂದಿಟ್ಟು ಕಕ್ಕಾಬಿಕ್ಕಿ ಮಾಡುವಾಗ
ಕರಗಿ ಹೋಗುತ್ತೇನೆ ನಿನ್ನೊಳಗೆ
ನಿನಗೇನು ಗೊತ್ತು ಅದರ ಬಗೆ ?

ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ (೨೨ ಜುಲೈ ೧೩ )

ಆಷಾಡ ಹುಣ್ಣಿಮೆಯ ಗುರುಪೂರ್ಣಿಮಾ ನಮಗೆ ಗುರುವಂದನಾ
ಶಿಷ್ಯರೆಲ್ಲರೂ ಸೇರಿ ಗುರುವಿಗೆ ನಮಸ್ಕರಿಸುವ ಸುದಿನ
ಸುಂದರ ಸಮಾಜ ನಿರ್ಮಾಣದಲಿ ತೊಡಗಿದವರಿಗೆ ಗುರು ಪ್ರಣಾಮ
ಗುರು ಪೂರ್ಣಿಮಾ ಚಾತುರ್ಮಾಸ್ಯವ್ರತವ ವ್ಯಾಸರ ಪೂಜೆಯಿಂ ಪ್ರಾರಂಭ
ಚಾತುರ್ಮಾಸ್ಯ ವ್ರತ ಶ್ರದ್ಧಾ ಭಕ್ತಿಗಳಿಂ ಆಚರಿಸು ,ಸಮೃದ್ಧ ಆಹಾರ,
ಸೌಂದರ್ಯ, ಸದ್ಬುದ್ಧಿ, ಸತ್‌ಸಂತಾನ ದೊರೆಯಲಿ
ಈ ಸುದಿನ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು
,ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ
ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು
ಗುರು ಪೂರ್ಣಿಮಾ ದಿವಸ-ವೇದವ್ಯಾಸ’ ಸಾಂಕೇತಿಕಾರ್ಥವುಳ್ಳ
ರಹಸ್ಯಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಆಧ್ಯಾತ್ಮ, ಇತಿಹಾಸ,
ಜ್ಞಾನ, ವಿಜ್ಞಾನಗಳ ಕಣಜ , ವ್ಯಾಸ ಮಹರ್ಷಿಎಂದೇ ಪ್ರಸಿದ್ಧರಾದ
ಕೃಷ್ಣ ದ್ವೈಪಾಯನರ ವೇದಾಧ್ಯಯನ ಸೇವೆ ಅನನ್ಯ ,ಅಂದಿನ
ವೇದಮಂತ್ರಗಳನ್ನು ಯಜ್ಞಕಾರ್ಯಗಳ ಅನ್ವಯವಾಗಿ ಬೋಧಿಸಿದರು.
ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿ
''ವೇದವ್ಯಾಸ'' ಎಂಬ ಬಿರುದಾಂಕಿತ ಈ ಮಹತ್ಕಾರ್ಯದಲಿ
''ಗುರು ''ಎಂಬ ಕೀರ್ತಿಗೆ ಪಾತ್ರರು.
ನಾವು ಜನ ಸಾಮಾನ್ಯರು ನಮಿಸುವ ಶಿಷ್ಯರಾಗಿ ಎಲ್ಲ ಗುರುಗಳಿಗೆ
ನಾಳಿನ ಭವ್ಯ ಭಾರತ ನಿರ್ಮಾಣಕ್ಕೆ
ನಿಮ್ಮೊಳಗಿನ ಗುರುವ ಗೌರವಿಸಿ ,ಹೊರಬರುವುದೇ ಅಮೃತ
ಅಡಿಗೆ ಮನೆ
ಈ ಸುಂದರ ಕಾರ್ಯಾಗಾರದಲಿ ಇಂದು ಚಮತ್ಕಾರ
ಮಗಳು ನಾದಿನಿ ಅವಳ ಪುಟ್ಟವಳು ನಮ್ಮಮ್ಮ ಎಲ್ಲ್ಲರ ಧಾಳಿ
ಈ ಉಗ್ರಾಣದಲಿ ಇರುವೆಲ್ಲಾ ಪಾಕಗಳ ಇಳಿಸುವರು ಒಲೆಗೆ
ತಿನ್ನುತ್ತಲೇ ಕುಣಿದಾಡುವರು ರುಚಿಯ ಕೈ ಚಳಕದಲಿ ಜಾರಿ

ಸಂಜೆಗೆ ಮಳೆ ನೆವದಲಿ ಪಕೋಡಗಳ ತಯಾರಿ
ಚಿಪ್ಸ್ ,ಕುರುಕುರೆಗಳು ನಡುವಿನಲ್ಲಿ ಹಾರಿ ,ಅಬ್ಬಾ
ಸಾಂಬಾರಿಗೆ ರಜೆ ,ಬಾಸುಮತಿಯ ಘಮ ,ತರಕಾರಿಗಳ
ವಿಭಿನ್ನ ರೂಪ ,ಆಲೂಗಡ್ಡೆ ರಾಜನ ಮಹಾ ಪ್ರತಾಪ

ಮನ ಸೋಲುವುದು ಮನೆಯ ಈ ಸುಂದರ ಭಾನುವಾರ
ಬೆರಳ್ಗಳಲ್ಲಿ ಬಡಿಸುವಾಗ ಒಲವ ಮಹಾಪೂರ
ಅಮ್ಮನಿಗೂ ಅಡಿಗೆಮನೆಗೂ ಎಷ್ಟು ನಂಟು ,ನಾನೂ
ಅಮ್ಮನಾಗಿ ಸರ್ವಾಧಿಕಾರಿಯಾದೆ ಮನೆಯ ಹೃದಯಗಳಿಗೆ

ಅಡಿಗೆ ಮನೆ ಒಳಗೆ .......
ಭಾನುವಾರ ಧೀರ್ಘವಾದದ್ದು
ರವಿಯ ಮಯಾಜಾಲವೇ
ಚಂದಿರನ ತಂತ್ರವೇ
ಮನದ ಮುಸುಕೇ
ಹುಚ್ಹು ಕನವರಿಕೆಯೇ
ಈ ಪಾಂಚಜನ್ಯದಲಿ
ಸ್ವರ್ಗ ಸದ್ದು
ಮುಂಜಾವಿನಲಿ ಗುರುಪೂರ್ಣಿಮೆಯ ಹುಣ್ಣಿಮೆ ತಂಪ
ತುಟಿಗಿರಿಸಿ ಬೆಚ್ಚನೆ ನಗು ಅಪ್ಪಿಕೋ
ದಿನವೆಲ್ಲಾ ಕಳೆಯುವುದು ಕಾಮನ ಬಿಲ್ಲಿನಂತೆ
ನೀ ನಕ್ಕಾಗ ಈ ಮನ ನರ್ತಿಸುವ ನವಿಲಿನಂತೆ
ಸರ್ವ ಧರ್ಮ ಸಮನ್ವಯದ ಮಾತು ಹೇಳಿ ಕೊಟ್ಟು
ಬಿಚ್ಚು ಕತ್ತಿಯೆದೆ ಚೂಪಾಗಿಸಿ ದೇಶಭಕ್ತಿಯ ಬಿತ್ತಿದಿರಿ ನನ್ನೊಳಗೆ
ಸಮಿತಿಯಲಿ ಸಾಲಾಗಿ ಶಿಸ್ತಿನ ಕವಾಯತು ಮಾಡಿ ,ಎಲ್ಲರೆಲೆ ಊಟ
ಕಣ್ಣಿಗೊತ್ತಿಕೊಂಡು ಇಂದು ಜಾತಿಯ ಮಾತೇ ಹಿಂದೂ ಮುಸ್ಲಿಂ ಕ್ರೈಸ್ತ ಎಂದು
ನೀವು ಬಿತ್ತಿದ ಈ ಮಾವಿನಲ್ಲಿ ಬೇವು ಈಗ ಹುಟ್ಟದು ಎಂದೆಂದೂ
ನೀ ನನ್ನ ಮೇಲಿಟ್ಟ ನಂಬಿಕೆಯ ತಪ್ಪಲಾರೆ ನಾನು
ಈ ಪ್ರೀತಿಗೆ ಪ್ರಮಾಣ ಬೇಕೇನು
ಸ್ವಾರ್ಥಿಯಾದೆನೆಂದು ಅಳಲೇ
ಪ್ರೀತಿ ಹಾಗೇನೆ
ಮುಗುಳ್ನಗೆಯ ದಾಟಿ ಮೆಲ್ಲನಡಿಯಿರಿಸಿದೆ
ನಿನ್ನೆದೆಯoಗಳದ ಜಾಜಿ ಪರಿಮಳಕೆ
ಬೆರಳ ಗುಲಾಬಿಯ ಬಣ್ಣಕೆ ಪತ್ತಲವ ನೇವರಿಸಿ
ನೆರಿಗೆ ಸರಿಸಿ ಮುಂದಡಿಯಿಡಲು .....
ಕರೆದೆಯಾ ಒಳಗೆ ?

ಅರಸುವ ಕಂಗಳ ಮೆಲ್ಲುಸಿರಿಗೆ ರೆಪ್ಪೆಯಾಗಿ ಸಾಕ್ಷಿ
ನೋಟದಲ್ಲಿ ಜೇನ ಮಧುರತೆ ತುಂಬಿ ಸುರಿಯಿತು
ನಿದ್ರಿಸುವಂತೆ ತೂಗಿಸಿತೆನ್ನ ನಿನ್ನೆದೆಯೊಳಗೆ
ತೋಳಾಶ್ರಯದ ಮೆತ್ತನೆ ಸ್ವರ್ಗದಲಿ
ಇರಬಹುದೇ ಹೀಗೇ ........ ಇನ್ನಷ್ಟು ಹೊತ್ತು .. ನನ್ನ ಮರೆತು
ಹಂಚಬೇಡ ಮೂರೂ ಕಡೆಗೆ
ಈ ಹೃದಯದ ತುಣುಕ
ತಾಳೆ ಹನಿಯೆ ರಕ್ತಪಾತ
ಸದ್ದೇ ನಿಲ್ಲಿಸುವ ಉಸಿರ

ಶನಿವಾರ, ಜುಲೈ 13, 2013

ಸಹಸ್ರಾರ ಮತ್ತು ಮೂಲಾಧಾರ ? ಮೂಲ ಆಧಾರ 

ಚಕ್ರಗಳ ಬಣ್ಣಗಳ ಬಗೆದು ಹೊರಗೆ ಬಾ ದೇಹದಿಂದ ನೊಡುತ್ತೇನೆ ನೀನಾರೆಂದು 
ಅತ್ಮವೇ ಸುಡುವ ಹಸಿವೆಗೆ ಭಗವಧ್ಗೀತೆ  ,ಉಣ ಬಡಿಸುವ ಮುನ್ನ 
ದೇಹಾತೀತ ಸಂಚಾರ ಸುಗಮವಾಗಲಿ, ಮಹಾಯುದ್ಧ್ಹದ ಉತ್ಸಾಹವನ್ನ ..... 

ಮನ:ಶಾಂತಿಗೆಂದು ದೇಹಾಶ್ರಮವ ಹುಡುಕುತ್ತಾ ಅರ್ಜುನನ ಪಾತಾಳದಲಿ ಸೇರಿ 
ಮತ್ತೊಂದು ಮೋಹಗೆಡದಿರು ,ಈ ಕುಂಡಲಿನೀ ಎಚ್ಹರಿಸಿದ್ದು ಕಾಮವನ್ನಲ್ಲ -ಒಳಗಿನರಿವನ್ನ 
ಚಿಕಿತ್ಸಾವರ್ಣಗಳಲಿ ವಿಕಾರಗಳ ಮೀರಿ ದೇಹ ಬಿಟ್ಟು ನಿಲ್ಲು ನೀನಾರು ?ಆತ್ಮ 

ಅಹಂ ಸುಂದರವೀ ದೇಹಾಲಂಕಾರಗಳು ಸಲ್ಲದ ವ್ಯಯಾರಗಳು ಬೇಗುದಿಯ ಉಬ್ಬರ 
ಹೊಟ್ಟೆ ಕಂದಿದರೆ ಕಣ್ಣು ಚಕ್ರ ಚಕ್ರವಾಗಿ ಬಣ್ಣಮೀರಿದ ಒರಟು ಭಾವದ ಬದುಕು, -ಈ ಎಲ್ಲ 
ಮೀರಿದ ಮೇಲೆ ಶಾಂತಿಗಾಗಿ ಮೌನ ,ಅಲೆದಾಟ ಬಣ್ಣವೇ ಬಿಳಿಯಾಗಿ ಬಿಡು ನಿರಾಳವಾಗಿ . 

ಸಹಸ್ರಾರದ ಬೆಳಕ ನೇರಳೆಯಲಿ ಬಂಧಿಸಿ ಪೀನಲ್ ಗ್ರoಥಿ ಯಲಿ ಚಲಿಸಿ ಬಣ್ಣಗಳಾಗಿ 
ಚಕ್ರಗಳ ಶಕ್ತಿವ್ಯೂಹದ ಬೆಸುಗೆಯಲಿ ಮಾನವಾತೀತವಾಗಿ ಹಸಿವು ಮೀರಿದರೆ ಈ ಗೋಜುoಟೇ 
ವಾಸನೆಗಳಿಲ್ಲದ  ಶೂನ್ಯದಲಿ ಕರ್ಮಯೋಗದ ನಿತ್ಯ ಶ್ರಮದ ಬದುಕು . 



ಅನಿಸಿಕೆಗಳ ಸುಭದ್ರ ಕೋಟೆಯೊಳಗೆ ನನ್ನ ಹುಗಿದಿಡಬೇಡ 
ಕೆಳೆದುಕೊಳ್ಳುವೆ ನನ್ನ ನಾನಲ್ಲದವಳನ್ನ ,
ಕೆಟ್ಟ ಗಾಂಬೀರ್ಯದ ಹಿಂದೆ ,ಮನಬಿಚ್ಚಿನಗುವ 
ಸ್ನೇಹದ ಬೆಸುಗೆಗೆ, ಆಯಿತು ಬಿಡು ಅನ್ನಬೇಡ -ನಾನಿಲ್ಲ ಅಲ್ಲಿ 

ಮಾತುಗಳ ಮೌನದಾಚೆ ಉಳಿದ ಕೊಪ್ಪರಿಗೆ ಪ್ರೀತಿಯ
ಹೊತ್ತು ಓಡುವೆನೆಂಬ ಅನಿಸಿಕೆ ಬೇಡ -ವಜ್ರ ವಿಷ .
ಬಂಡೆಗಲ್ಲಿನ ಭಾರದಿ ಮೈಚಾಚಿ ಮಲಗಬಲ್ಲೆ ನಿನ್ನೊಳಗೆ
ತೆರೆದು ಮಾತಾಡು ,ಒಪ್ಪಿಕೋ ಬೆರಳ ಬಳಸಿದ್ದನ್ನ ......

ಗುರುವಾರ, ಜುಲೈ 11, 2013

ಬದುಕಿರದ ಅಪ್ಪ 

ಬದುಕ ಬವಣೆಯನು ಕಂಡ ಅಪ್ಪ ಸಾಕಿದ್ದು 
ಹಲವು ಹುಡುಗರನ್ನ ,ಊಟ ,ಬಟ್ಟೆ ಸೂರು,ಓದು 
ಎಲ್ಲದಕ್ಕೂ ತೆರೆದ ಕೈ ದೊರೆಯಾದವರು 
ನಮ್ಮನೆಯಲ್ಲಿದ್ದವರು ಹತ್ತಾರು ಅಣ್ಣಂದಿರು

ಮುದುಕರನ್ನ ಹುಡುಕಿ ತರಕಾರಿ ತರುವ
ಬೇಡದಿದ್ದರೂ ಹುಡುಗನಿಗಾಗಿ ಸಂಜೆ ಪತ್ರಿಕೆ ಕೊಳ್ಳುವ
ಹಸಿದವರನ್ನು ಅನಾಮತ್ತು ಮನೆಗೆ ಕರೆತರುವ
ತನ್ನ ಬಟ್ಟೆಗಳ ,ಹಾಸು ಹೊದಿಕೆಗಳನಮಗಚ್ಹರಿಯ ದಾನಿ

ಕೊಟ್ಟದ್ದು ತನಗೆ ಬಚಿಟ್ಟದ್ದು ಪರರಿಗೆ ಎಂದು
ಉಳಿತಾಯವೇ ಅರಿಯದ ಆದರ್ಶ ಜೀವಿ
ತನ್ನ ಮಕ್ಕಳಿಗೆ ಕಲಿಸಿದ್ದು ಗಟ್ಟಿಯೆದೆ ಬದುಕು
ಸತ್ಯ ನ್ಯಾಯಗಳ ವಜ್ರ ಖಚಿತ ಜೀವನವನ್ನ

ದಿಟ್ಟ ಹೆಜ್ಜೆಯ ಜೀವನ ಕಾಣಲು ಬದುಕಿರದ ಅಪ್ಪ
ನಡೆ ನಡೆಯಲ್ಲೂ ಪ್ರತಿಬಿಂಬದ ನಗೆ ಬೀರುತ್ತಾರೆ
ಇಪ್ಪತ್ತರ ಮುಗ್ಧತೆಯಲ್ಲಿ ಕೈ ಬಿಟ್ಟು ಅಸ್ತಮಿಸಿ
ಪ್ರತಿದಿನವೂ ಉದಯಿಸುವರು ನಮ್ಮ ಹೃದಯದಲ್ಲಿ 
ಜೀವನ ,ನಾವು ತಪ್ಪಿದ್ದೆಲ್ಲಿ ?

ಸದಾ ಕೆಲಸದಲ್ಲಿ ತೊಡಗಿದ ಆ ಒರಟು ಕೈ ಗುಡ್ಡೆಯ ತರಗಲೆ ಪ್ರತಿ ಮಧ್ಯಾನ್ಹ ಗುಡಿಸಿದ್ದನ್ನ ಕಂಡಿದ್ದೇನೆ ,
ಸೆರಗು ಹಿಡಿದು ಆರರ ಬಾಲೆಯಾದರೂ ನಾನೂ ಎಂದು ರಾಶಿಯಲಿ ಧೂಳಾಟವಾಡಿದ್ದೇನೆ ,
ಗೇರುಮರ ಹತ್ತಿ ಅಂಗಿ ಕಲೆಯಾದಾಗ ,ಮಾವಿನ ಹಣ್ಣು ,ಹಲಸು ಪೇರಲೆಗಳ,ಅತ್ತಿ ,ಏಲಕ್ಕಿಗಳ ಸವಿದಿದ್ದೇನೆ 
ತರಗಲೆ ಒಲೆ ಸೇರಿ ಸಂಜೆ ಸ್ನಾನದ ಸರದಿಯಲಿ ಹತ್ತನೆಯವಳಾಗಿ ದೊಡ್ಡಮ್ಮನ ಒಪ್ಪಕ್ಕೆ ಬಿದ್ದಿದ್ದೇನೆ

ಆ ಹಿರಿ ಜೀವ ದಿನ ಬೆಳಗೂ ಮೂರು ಗಂಟೆಗೇ ದೋಸೆಯ ರಾಶಿ ಮಾಡಲು ಏಳುತ್ತಿತ್ತು ,ರುಬ್ಬಿ ನಡುರಾತ್ರಿ ಮಲಗುತ್ತಿತ್ತು
ನ್ಯಾಯ ಮಾಡುವ ಕಿರಿಯರ ಕಿವಿ ಹಿಡಿದು ,ಕೆಲಸ ಹಂಚಿ ,ಕುಚ್ಚಿಗೆ ಗಂಜಿಯ ಬೆಲೆ ಕೊಡಿಸುತ್ತಿತ್ತಾ ಜೀವ ,
ಪಕ್ಕನೆ ಬೇಡವಾಯಿತು ಹೊಸ ಸಂತತಿಗೆ ,ಯಾರ ಜೀವನಕ್ಕಾಗಿ ಜೀವ ತೇದರೂ ಬಂದದ್ದು ಧೂಳ ಕಣ ಮುಖದ ಮೇಲೆ
ಸಗಣಿಯ ಅಂಗಳದಲ್ಲಿ ರಾಶಿ ಬೀಳುತ್ತಿದ್ದ ಹಲಸಿನ ಹಪ್ಪಳ ಆ ಕಾಲಕ್ಕೇ ಕೊನೆಯಾಯಿತು ,ಕುಚ್ಚಿಗೆ ವೈಭವವೂ

ಊರು ಊರಿಂದ ಧಾವಿಸುವ ನೆಂಟರು ಕೊಂಡೊಯುತ್ತಿದ್ದ ಉಪ್ಪಿನಕಾಯಿ ಜಾಡಿ ,ಹಪ್ಪಳ ರಾಶಿ ಇಂದು ಇಲ್ಲ
ಸವೆದ ಹಿರಿ ಜೀವ ಮಾತ್ರ ಎಲ್ಲೋ ಮಲಗಿ ಸವೆದ ಕೈಗಳ ಕರ್ಮ ನೆನೆದು ದು:ಖಿಸುತಿಹುದಲ್ಲ . ,
ಬೇಡ ಹಣ ,ಬೇಡ ಕರುಣೆ ,ಇರಲಿ ಪ್ರೀತಿ ನಿರಂತರ ,ಕಾಲ ಕಾಲಕೂ ಜೀವನ ಚಕ್ರವಿದು ವಿಚಿತ್ರ ಮನದಂತರ
ಸ್ನಾನ -ಊಟದೊಂದಿಗೆ ಬದುಕ ಕಲಿಸಿದ ಈ ಜೀವಕ್ಕೆ ಕೋಟಿ ನಮನ ,ಆ ಜೀವದ ಆರೋಗ್ಯಕ್ಕಾಗಿ ಹೃದಯದ ತಪನ .
ಶಿರಡಿ ನೆಲದಲಿ -ಸಾಯಿ ಸನ್ನಿಧಿಯಲಿ 

ಕಮಲಗಳರಳೆ ಹೃದಯದಲಿ ,ನಿನ್ನ ಪದತಲದಲ್ಲಿ ಇರಿಸಿ ,ಧನ್ಯಳಾದೆನು ಶಿರಡಿ ಬಾಬಾ 
ವರುಷಗಳಿಂದ ಕಾದ ಶಿರಡಿ ನೆಲ ಸೋಂಕಿದೊಡನೆ ರೋಮಾoಚನದ ನೀಲಿ ಮಿಂಚು 
ಮನ ನಡುಗಿ ಹೊಂದಿಕೊಂಡಿತು ನಿನ್ನ ಪ್ರಭೆಯಾವರಣಕೆ ,ಮನಸು ಒಪ್ಪಿಸಿತು ರಾಶಿ ನಮನ 
ಪುಷ್ಪ ಫಲಗಳ ಕಾಯುವಿಕೆಗೆ ತಾಳದೇ ಧಾವಿಸಿದೆ ಧರ್ಶನದ ಶುಭ ಗಳಿಗೆಗೆ ಜನಸ್ತೋಮದ ನಡುವೆ

ಭಜನೆ ಘೋಷಗಳ ಹಿತದ ಕೂಗುಗಳಿಗೆ ನನ್ನೆದೆಯಲೂ ಹರ್ಷನಾದ ,ಆರತಿಯ ಮಂಗಳದಲಿ ಸುನಾದ
ಮಂಟಪಗಳಲಿ ಕುಳಿತು ಪರವಶರಾದ ಜನರ ಕಂಡೆ ,ನಿನ್ನ ಕಂಡು ಕಣ್ನೀರಲಿ ನೆನೆದ ಕೆನ್ನೆಗಳಲ್ಲೂ ಗುಲಾಬಿ ನಗು
ಭುವಿಯ ಸಂಗದಿಂದಾಚೆ ಸಮಾಧಿಯಲಿ ಹರಸಿ ,ನಿಜಪ್ರಕಾಶಗಳ ಪಸರಿಸುವ ಪ್ರೇಮ ಸಾಧುವೇ ಅಶೀರ್ವದಿಸು
ಮಗುವಿನೋಪಾದಿಯಲಿ ನಿನ್ನ ತೊಡೆಯೇರುವ ಈ ಲಕ್ಷೋಪಲಕ್ಷ ಮಕ್ಕಳನು ಪಾಲಿಸಿ ಓಲೈಸು

ಈ ಮನೆಯ ಬೆಳಕು ಹಚ್ಹಿದ ದಿನದಿoದ ಈ ಬೆರಳುಗಳ ನಮಸ್ಕಾರಗಳ ,ಬೇಡಿಕೆಗಳ ,ಅಂತರಂಗದ ಅಬಿವ್ಯಕ್ತಿಗಳ
ಬದಲಾದಂತೆ ಎರಡೆಣಿಸದೇ ಹರಸುತ್ತಿರುವೆ ,ಸಂಸಾರದ ನಗು ,ನೋವು ,ಸುಖ ,ಕಷ್ಟಗಳಲಿ ಭುಜದಮೇಲೊoದು ಕೈ
ಭರವಸೆಯ ,ಜೀವನ ಅರೋಗ್ಯ ದಾನ ಕರುಣಿಸಿರುವೆ ,ಎದೆಯಲ್ಲಿ ಹನುಮನ್ನಿರಿಸಿ ರಾಮ ರಾಮ ಎಂದು ,ದುರ್ಗೆಗೆ
ಕೋಟಿ ನಮಿಸಿ ,ಸಾಯಿಯಲಿ ಶರಣಾಗತಿಗೊಪ್ಪಿಸಿ ಗುರುಸೇವೆ ಒಪ್ಪಿದ ಮಹಾತ್ಮನೇ ,ಪುನರ್ಧರ್ಶನಂ ಪ್ರಾಪ್ತಿ ರಸ್ತು ಎಂದು ಹರಸು
ಕೇಸರೀ ದ್ವಜದ ಪಂಡರಾಪುರ ಯಾತ್ರೆ 
ಪಂಡರಾಪುರಕ್ಕೆ ಹೊರಟ ವಿಠಲನ ಭಕ್ತರ ಪಾದ ಯಾತ್ರೆಯ ನೋಡಿದೆ 
ಪೂಣೆಯಿಂದ ಶಿರಡಿಯವರೆಗೂ ಭಕ್ತಿ ಗಾನಗಳ ಭಜನೆಗಳ ಸಾವಿರ ಸ್ವರ ಕೇಳಿದೆ ,
ಇಂದು ಆಷಾಡದ ಮೊದಲ ದಿನ ,ಬರುವ ಏಕಾದಶಿಗೋ ವಿಠಲನ ದರ್ಶನ ........ 
ಸುಂದರ ಸೊಂಟದ ಮೇಲೆ ಕೈಇಟ್ಟುಕೊಂಡು ಇಟ್ಟಿಗೆಯ ಮೇಲೆ ನಿಂತ ಪ್ರಭುವೇ 
ಕೊರಳಲ್ಲಿ ತುಳಸೀಮಾಲೆ ಪೀತಾಂಬರವ ತೊಟ್ಟ ಪ್ರಿಯ ಮೂರ್ತಿಯೇ ,
ಮೀನಾಕಾರದ ಕುಂಡಲ ,ಕೊರಳಲಿ ಕೌಸ್ತುಭ ,ವಿಠಲನೇ ಪುಣ್ಯವಂತರಿವರು ,
ನನಗಾವಾಗ ದರುಶನ ಪ್ರಭುವೇ ?ಈ ಗುಂಪುಗಳ ಉತ್ಸಾಹದಲಿ ಹೃದಯ ಬೆರೆಸಿಹೆನು .
ಕ್ಷಣ ಕಾಲ ನಿನ್ನ ಬಾಗಿಲಲಿ ನಿಂತು ನಾಲ್ಕು ಮುಕ್ತಿ ಪಡೆದವರೊಂದಿಗೆ ಸೇರಿಸೆನ್ನ
ಸಲೋಕತ ,ಸಮೀಪತಾ ,ಸರೂಪತಾ ,ಸಾಯುಜ್ಯತಾ ನಾಲ್ಕೂ ಮುಕ್ತಿ ಬೇಕೆನಗೆ ,
ಸಂಸಾರದಲ್ಲಿದ್ದೂ ಹರಿ ಹರಿ ಎಂದು ನಾಮ ಸ್ಮರಣೆ ಮಾಡುವೆನು ,
ಒಮ್ಮೆ ಬಂದುಬಿಡು ಎಂದೂ ಸದಾ ನನ್ನಲ್ಲಿರುವಂತೆ ಪಾಂಡುರಂಗ ವಿಠಲ.
ಪಂಡರಾ ಪುರವ ತೋರಿಸು ಇಂದೇ ಕನಸಿನಲ್ಲಿ .
ನಿನ್ನ ಒಲವು 
ನಸುನಗುವಿನಲಿ ಸುತ್ತಲಿಗೆ ಬೆಳಕು ಚೆಲ್ಲುವ 
ನಕ್ಷತ್ರದ ರಾಶಿಯoತೆ ನೀನು 
ಆ ನಗುವಿನ ಸೌoದರ್ಯದಲಿ ಹೃದಯವು 
ಹೊಸರಾಗಗಳ ಹೊರಡಿಸುವುದೇನು ..... 

ನಿನ್ನೊಲವಿನ ಮಾತು ಸವಿ ಸಕ್ಕರೆಗಿoತ ಹಿತ
ಕೆನ್ನೆಯೊರಗಿ ಮುದ್ದಿಸುವಾಗೆಲ್ಲಾ ಸೊಬಗಿಗೆ ಮನಸೋತು
ಸೂರ್ಯ ಚಂದ್ರರ ಪರಿವಿರದೇ ಮನಸ್ಸು ಕರಗಿ
ಹಗಲೂ ರಾತ್ರಿಯೂ ಬೆಳಕಿತ್ತಲ್ಲ ?

ಪರಿಧಿಯ ದಾಟಿ ಹೊಸ ಶರಧಿಗೆ ಧಾವಿಸಿದ
ಮುದ್ದು ಜಲಪಾತವೇ ದುಮ್ಮಿಕ್ಕು ನನ್ನೊಳಗೆ
ತುಂಬಿದೊಲವಲಿ ಗಿಳಿಯುಲಿ ಹಾಡುತ್ತಾ
ಹೀಗೆ ಸದಾ ಸಪ್ತ ಸ್ವರಗಳ ಹೊಮ್ಮಿಸುವೆಯಾ.....
''ಅತ್ಯುತ್ತಮ ಸಣ್ಣ ಕತೆಗಳು ''೧ ೨ ಕಥೆಗಳ ಸಂಕಲನ .ಸoಪಾದಕರು -ಕೆ .ನರಸಿoಹಸ್ವಾಮಿ ,ಕನ್ನಡ ಸಾಹಿತ್ಯ ಪರಿಷತ್ತು . ಈ ಕಥಾ ವಸ್ತುವಿನ ತಂತ್ರ ವೈವಿದ್ಯತೆ ವಸ್ತು ಮನಮುಟ್ಟುತ್ತ ದೆಂದರೆ ,ವಸ್ತುವಿನ ನವೀನತೆ ,ಒಳಮನಸ್ಸಿನ ತಾಕಲಾಟ ಗಳು ,ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ . ಮೊದಲ ಕಥೆ ''ಗಿರಿಜೆ ಕಂಡ ಸಿನಿಮಾ''-ಶ್ರೀ ಬಸವರಾಜ ಕಟ್ಟಿಮನಿ , ನಾಲ್ಕು ಮೊಳ ಭೂಮಿ -ಶ್ರೀ 'ಚದುರಂಗ'ರದು, ''ದೇವರೇ ಬರಲ್ಲಿಲ್ಲ ''-ಶ್ರೀ ಎಸ್ . ಅನಂತ ನಾರಾಯಣದವರದು , ''ಮುಕ್ಕಣ್ಣನ ಮುಕ್ತಿ '' -ಶ್ರೀ ಕೋ .ಚೆನ್ನಬಸಪ್ಪ , ''ದ್ಯಾಮ-ಕೆಂಚಿ''-ಶ್ರೀ 'ವರಗಿರಿ'ಯವರದು,''ಮುಯ್ಯಿ ''-ಶ್ರೀ ಎಲ್ .ಎಸ್ .ಶೇಷ ಗಿರಿರಾವ್ ,''ಬಾಗಿಲು ತೆರೆದಿತ್ತು ''-ಶ್ರೀ ವರದರಾಜ ಹುಯಿಲುಗೋಳರದ್ದು ,'' ನಮ್ಮೂರ ನಾಯಕರು ''- ಶ್ರೀ ಮಿರ್ಜಿ ಅಣ್ಣಾರಾಯ ,೧ ರಾಮ ರಾಜ್ಯ ೨ ಅನುಭವಾಮೃತ ೩ ಗುಪ್ತಚಾರ -ಶ್ರೀ ವಿ ಜಿ ಭಟ್ಟರದು ,''ಭೂಮಿ ಕಂಪಿಸಲ್ಲಿಲ್ಲ ''-ಶ್ರೀ ಶ್ರೀಕಾಂತ , ''ನಲ್ಲಿಯಲ್ಲಿ ನೀರು ಬಂದಿತು ''-ಶ್ರೀ ಸದಾಶಿವ ದವರದು. ಒಂದಕ್ಕಿಂತ ಒಂದು ಸುಂದರವಾದ ಕಥೆಗಳು ನವೀನವೂ ಸರಳವೂ ಈ ಬರಹಗಳು ,ದುಃಖ ,ತಿಳಿ ಹಾಸ್ಯ ,ಬಡತನ ,ಶಿಸ್ತು ,ಮಾನವೀಯ ಮೌಲ್ಯಗಳು ಕಥೆಗಳನ್ನು ವಿಶೇಷವಾಗಿಸಿವೆ . ಹೊಸಗನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಸಣ್ಣ ಕಥೆ ಪ್ರಮುಖ ಪಾತ್ರ ಹೊಂದಿರುವುದು, ಈ ಕಥೆಗಳ ಚೆಲುವನ್ನ ಅಮೂಲ್ಯವಾಗಿಸಿದೆ .

ಖಾಲಿ ಪುಟ 

ಮದುರತೆಯ ಮೊದಲ ಹನಿಯ 
ಅನುಭವ ಹಿತ ತರುವಾಗಲೇ 
ತಿಳಿದೋ ತಿಳಿಯದೆಯೋ ಕಲ್ಲಾಗುವಾಸೆ . 

ಕಲ್ಲೂ ಕರಗುವ ದನಿ ಹತ್ತಿರ ಕರೆದಾಗಲೂ
ಬಾವನೆಯುಬ್ಬರ ,ದುಃಖ ಸಹಿಸದೇ
ಇಲ್ಲಿರದಂತೆ ಹೋಗಿ ಬಿಡುವಾಸೆ .

ನಿರಂತರ ಚಲನೆಯ ಜೀವನ ಚಕ್ರದಲ್ಲಿ
ಆಗಾಗ ಬೇಟಿಯಾಗುವ ಜೀವಗಳಿಗೆ
ಮೌನ ,ನಿಶ್ಯಬ್ದ ಸಾಕೆನ್ನುವ ಆಸೆ .
ಬಾಳಗೆಳೆಯನಿಗೆ 

ಮೈಯುದ್ದಗಲಕ್ಕೂ ಹರಡುವ ರೋಮಾoಚನ ಜಾತ್ರೆಯಲ್ಲಿ 
ಬರೆದ ಬಣ್ಣ ಬಣ್ಣದ ಆಸೆಗಳ ಮೂಲಕ್ಕೆ ಮುತ್ತಿಟ್ಟ ಪ್ರಿಯವೇ 
ಈ ಅಲುಗುವಿಕೆಯ ,ನುಲುಗುವಿಕೆಯ ಮೆತ್ತನೆ ಸ್ಪರ್ಶದಲ್ಲಿ 
ಬಿದ್ದು ಬಿಡುವ ಅಸೆಯಿದೆಯಲ್ಲಾ ನಿನ್ನ ರಸಿಕತೆಯಾಳದಲ್ಲಿ .

ಬದುಕಿನ ಬಂಡಿಯನ್ನು ಮುಂದೆ ಮುಂದೆ ದೂಡುತ್ತಲೇ ಕಾಲ ಗರ್ಭದಲ್ಲಿ
ಸೇರಿ ಹೋದ ಕೋಟಿ ಕ್ಷಣಗಳಿಗೆ ನಿಮೀಲಿತ ಕಂಗಳಲ್ಲಿ ಬೆಳಕನ್ನಿಡುತ್ತಾ
ತೋಳೊಳಗೆ ಸೇರಿದ ಕೈ ಬಿಸಿಯಪ್ಪುಗೆಯಲ್ಲಿ ಚಲಿಸುತ್ತಲೇ
ಮನದ ಹಬ್ಬವಾದ ಹಿತದ ಬಿಗಿತಕ್ಕೆ ಕಾದಿದೆ ಪಲ್ಲವವಿಲ್ಲಿ .

ನಿದ್ರಿಸಿದರೆ ಕನಸುಗಳಲ್ಲೂ ,ಎಚ್ಚರವಿರೆ ಇರುವೆಲ್ಲೆಲ್ಲೂ ಕಾಡುವ
ಭೂ ಸ್ಪರ್ಶಗೊಂಡ ಮಳೆಹನಿಯಂತೆ ಸಾರ್ಥಕವಾಗುತ್ತಾ ,ತಂಪ ಬೇಡುತ್ತಾ
ಕಾವಿಗೆ ಬೆರಳಿಟ್ಟು,ಮಳೆಗೆ ತುಟಿಯಿಟ್ಟು ಪುನ: ಕಾಯುತ್ತಲೇ
ರಸಿಕತೆಯಲಿ ಕಟ್ಟಿದ ಶೃoಗಾರ ಮಹಲಿನಲಿ ಬಾಳುವುದಿದೆಯಲ್ಲಾ ಸುಖವಿಲ್ಲಿ
ಎದೆಯುತ್ತರ 

ನೀನಾಗು ನನ್ನೆತ್ತರಕ್ಕೂ ಹರಡುವoತಹಾ ಹಸಿರು 
ಪ್ರತೀ ಚಿಗುರಿನಲ್ಲೂ ,ಹೊಸ ತಲ್ಲಣ ಎದೆಗೆ 
ಪ್ರೀತಿಯ ಉಬ್ಬರದಲ್ಲೂ ಅಲೆಅಲೆಗೂ ಹರಡುವ 
ನಿಂತ ನೀರು ಹರಿವ ಪುಳಕವೆದೆಗೆ .

ಎದೆಉತ್ತರವೇ ತುಮುಲಗಳ ಸೃಷ್ಟಿಸುತ್ತಾ
ಪಸರಿಸಿದೆ ಮುಗುಳ್ನಗುವ ಮೊಗ್ಗುಗಳನು
ಕಂಬನಿಗೆ ಕೆನ್ನೆಯಿರಿಸಿ ಸಂತಸದ ಹನಿಯೇ?ಎಂದು
ಹಸಿರು ಕೇಳುತಿದೆ ಉಸಿರೊಳಗೆ ಸೇರಿ .

ಗುರುವಾರ, ಜುಲೈ 4, 2013

ಸ್ನೇಹದ ಸುತ್ತ ಕವಿದ ನೆರಳು

ಸ್ನೇಹದ ಸುತ್ತ ಕವಿದ ನೆರಳು 

ನೆಲವೇ ನಡುಗಿ ನಿಂತ ಪಾದಗಳಡಿಗೆ ಬೆಂಕಿಯ ರಾಶಿ ಹಾಕಿದಾಗ 
ಹತ್ತಿ ಉರಿವ ದೇಹದ ಹಿಂಸೆ ತಾಳಲಾರದೇ ಜೀವ ಓಡಿ ಹೋಗುತ್ತದೆ 

ಪ್ರಾಣವನ್ನೇ ಹಿಂಬಾಲಿಸಿ ನಡೆಯುತ್ತಿರುವೀ ನೆರಳನ್ನು ಕಂಡಾಗ 
ಉಸಿರಾಟದ ಉಕ್ಕುವ ತಿದಿಯನ್ನ ತಾಳಲಾರದೆ ಮನಸ್ಸು ಕರಗುತ್ತಿದೆ 

ಎಣಿಕೆಯ ಒಂದೊಂದೇ ಅಕ್ಷರಗಳನ್ನು ಹೃದಯ ಹೆಕ್ಕಿ ಕೊಂಡಾಗ 
ದೇಗುಲದೆದುರು ನೆಲದಲ್ಲಿ ಹರವಿದ ನಾಣ್ಯದಂತೆ ನೋವಾಗುತ್ತದೆ 

ಎಳೆಯ ನಡುವೆಯೂ ನಾನಾ ಪ್ರಶ್ನೆಗುತ್ತರಿಸದ ನನ್ನದೇ ಮನಸ್ಸೂ 
ಎಲ್ಲೂ ನಿಲ್ಲದ ನಿರಂತರತೆಯ ನದಿಯಂತೆ ಸಮುದ್ರದತ್ತ ಹಿಗ್ಗಿದೆ 

ನೀಲಾಕಾಶದ ಉದ್ದಗಲಗಳ ಅಳತೆ ತಪ್ಪುವಾಗಲೂ ಸಶಬ್ದವಾದ 
ಎದೆಬಡಿತವೂ ಸುಟ್ಟು ಕಳೆಯೊಂದಿಗೆ ನನ್ನ ಬೆಳೆಯನ್ನು ನಾಶವಾಗಿಸಿದೆ 

ಸ್ನೇಹದ ಸುತ್ತ ಕವಿದ ಈ ನೆರಳು ,ನೆರಲಾಗದೇ ಹತ್ತಿ ಉರಿವ
ಅಗ್ನಿ ಕುಂಡವಾಗಿ ಆರಿದ ನಂತರವೂ ನಿಗಿಯುವ ಕೆಂಡವಾಗಿದೆ 

ನೀರಿನಲ್ಲಿ ಮುಳುಗುವ ಕೊನೆಯಿರದೇ ಪ್ರವಹಿಸಿ ನಡೆವ ಯಾತ್ರೆಯಂತೆ 
ಜೀವನ ಚಕ್ರ ಚಲಿಸುತ್ತಿದೆ ,ಇರಬಹುದೇ, ಇರಲೇ ಬಾರದೇ ಉಸಿರು ಎಂದು ?

ಬದುಕಿರಬೇಕೆ ?ಎಂದು ಕೇಳಿ

ಬಾಳಗೆಳೆಯನಿಗೆ


ಬಾಳಗೆಳೆಯನಿಗೆ 

ಮೈಯುದ್ದಗಲಕ್ಕೂ ಹರಡುವ ರೋಮಾoಚನ ಜಾತ್ರೆಯಲ್ಲಿ 
ಬರೆದ ಬಣ್ಣ ಬಣ್ಣದ ಆಸೆಗಳ ಮೂಲಕ್ಕೆ ಮುತ್ತಿಟ್ಟ ಪ್ರಿಯವೇ 
ಈ ಅಲುಗುವಿಕೆಯ ,ನುಲುಗುವಿಕೆಯ ಮೆತ್ತನೆ ಸ್ಪರ್ಶದಲ್ಲಿ 
ಬಿದ್ದು ಬಿಡುವ ಅಸೆಯಿದೆಯಲ್ಲಾ ನಿನ್ನ ರಸಿಕತೆಯಾಳದಲ್ಲಿ . 

ಬದುಕಿನ ಬಂಡಿಯನ್ನು ಮುಂದೆ ಮುಂದೆ ದೂಡುತ್ತಲೇ ಕಾಲ ಗರ್ಭದಲ್ಲಿ 
ಸೇರಿ ಹೋದ ಕೋಟಿ ಕ್ಷಣಗಳಿಗೆ ನಿಮೀಲಿತ ಕಂಗಳಲ್ಲಿ ಬೆಳಕನ್ನಿಡುತ್ತಾ 
ತೋಳೊಳಗೆ ಸೇರಿದ ಕೈ ಬಿಸಿಯಪ್ಪುಗೆಯಲ್ಲಿ ಚಲಿಸುತ್ತಲೇ 
ಮನದ ಹಬ್ಬವಾದ ಹಿತದ ಬಿಗಿತಕ್ಕೆ ಕಾದಿದೆ ಪಲ್ಲವವಿಲ್ಲಿ . 

ನಿದ್ರಿಸಿದರೆ ಕನಸುಗಳಲ್ಲೂ ,ಎಚ್ಚರವಿರೆ ಇರುವೆಲ್ಲೆಲ್ಲೂ ಕಾಡುವ
ಭೂ ಸ್ಪರ್ಶಗೊಂಡ ಮಳೆಹನಿಯಂತೆ ಸಾರ್ಥಕವಾಗುತ್ತಾ ,ತಂಪ ಬೇಡುತ್ತಾ 
ಕಾವಿಗೆ ಬೆರಳಿಟ್ಟು,ಮಳೆಗೆ ತುಟಿಯಿಟ್ಟು ಪುನ: ಕಾಯುತ್ತಲೇ 
ರಸಿಕತೆಯಲಿ ಕಟ್ಟಿದ ಶೃoಗಾರ ಮಹಲಿನಲಿ ಬಾಳುವುದಿದೆಯಲ್ಲಾ ಸುಖವಿಲ್ಲಿ 

ಬುಧವಾರ, ಜುಲೈ 3, 2013

ಮೋ .ಕ. ಗಾಂಧೀ

ಮೋ .ಕ. ಗಾಂಧೀ ಯವರ'' ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ '' ಬಾಷಾಂತರ ;ಗೋರೂರು ರಾಮಸ್ವಾಮಿ ಅಯ್ಯಂಗಾರ್ .ನವಜವಾನ್ ಟ್ರಸ್ಟ್ ನಿಂದ ,ಈ ಪುಸ್ತಕ ಎಷ್ಟು ಮನಗಳ ಗೆದ್ದಿರುವುದೋ ,ಭಾರತದ ಯುವಜನರ ಹೃದಯವೋ ತಿಳಿಯೆ ಸತ್ಯಶೋದನೆಯ ಪ್ರಯೋಗಗಳು,ಆದ್ಯಾತ್ಮ ಪ್ರಯೋಗಗಳು ,ನಾಗರೀಕ ಪ್ರಪಂಚವರಿತ ಎಲ್ಲರೂ ಬಲ್ಲ ಮಹಾತ್ಮಾ ಎಂಬ ಬಿರುದು ಅವರನ್ನು ಉಬ್ಬಿಸಿಲ್ಲದ ಕಾರಣ ಮತ್ತದರ ನೋವು ,ಅವರ ರಾಜಕೀಯ ಶಕ್ತಿಯ ಬಲ ಅಲೋಚನೆ,ಸತ್ಯಶೋಧನೆ, ಅಹಿಂಸೆಯ ಪರಿಪೂರ್ಣ ಆಚರಣೆ ಒಂ ದೇ ಎರಡೇ ,ಅವರ ನುಡಿಗಳು ಬದುಕನ್ನು ದೃಢವಾಗಿಸಬಲ್ಲವು ವಿಮರ್ಶಿಸಲಾಗದ ರತ್ನವಿದು . ಮೋ .ಕ. ಗಾಂಧೀ ಯವರ ಬರಹ

ನಾನು

ನಾನು 
ಅಗಸವೇ ನೀನು ನನಗೆ ಪ್ರಿಯ ವಿಸ್ತಾರ .... 
ನಿನ್ನಳತೆಗೂ ಈಗ ಹರಡಿಕೊಂಡಿದ್ದೇನೆ . 

ನೀಲಿ ಪ್ರೀತಿ ತೆರೆ ಎದೆ ತುಂಬಿಕೊಂಡು 
ಹೊಸ ಮನೆಯಲ್ಲಿ ಹೊಸಿಲಲ್ಲಿ ಹೂವಿಟ್ಟಿದ್ದೇನೆ .

ಬೆರಳ್ಗಳಲ್ಲಿ ಕ್ಷಣವೂನಿಲ್ಲದ ಹಿತದ ಮಳೆಗೆ
ಅತಿ ಪ್ರೀತಿಯ ರಾಶಿಯಲಿ ಎಳೆದಿಟ್ಟಿದ್ದೇನೆ

ಅಪ್ಪುಗೆಯ ಬೆಚ್ಚನೆ ಹಿತದ ಅಗಲಳತೆಗೆ ಹೊಂದಿ
ಆವರಸಿಕೊಂಡು ಮುಂದಡಿಯಿಟ್ಟಿದ್ದೇನೆ ಕರಗಿಸಿಕೋ ಬೇಗ

ನಿರ್ಮಾಣ

ನಿರ್ಮಾಣ 
ಪರಿಕರಗಳಿಲ್ಲದೇ ಪ್ರಕೃತಿಯ ಕಣ್ಣಿನ ಹನಿಯೊಂದರಲ್ಲೇ 
ನನ್ನ ಜೀವನದ ನಿರ್ಮಾಣ ,ನಡೆಯಲಿ ಬದುಕಿನ ಪಯಣ 
ನಿರಂತರ ಹಸಿರು ಉಸಿರುಗಳ ಬದುಕಿನ ಕಥನ 

ಸ್ಪರ್ಶಸಾಧ್ಯಗಳ ,ಅಸಾಧ್ಯಗಳ ಕನಸುಗಳಿಗಿರಬಹುದೇ ಸಾಕಾರ
ಏಕೆ ಎತ್ತರಕ್ಕೇರುವಲ್ಲಿ ಮಣ್ಣು ಗೋಡೆಗಳ ನಡುವೆಯೂ ಕಲ್ಲಿನಾಕಾರ
ನಿಲ್ಲುವಂತದೇ ಈ ಮನದಾಳದ ಸಾಗರ ಮಥನ

ಉಪ್ಪಿರದ ಮುತ್ತಿನ ಚಿಪ್ಪುಗಳ ತುಟಿಗಿಟ್ಟ ಬಿಳೀಹೊದಿಕೆ
ತೆರೆದಾಗಿರುವ ಕುಡಿಜೀವಗಳ ಚಲನೆಯ ಮಹಾಓಟದ ನೋಟ
ಕಟ್ಟಬಹುದೇ ನನ್ನರಮನೆ ನಿರ್ಮಾಣ -ನೀರಿನಾಳದ ಪಾತಾಳದ ತಪನ .

ಸಂತಸದ ಹನಿ

೧ 
ಇರುವು 
ಈ ಸುಡುಬೇಸಿಗೆಯ ಸುಡುಬೇಗೆ ನನ್ನೆದೆಯಲ್ಲಿ
ಎದೆಯೆಬ್ಬಿಸುವ ಬಿಸಿನೋವೊಳಗೂ ಅರಳುವ
ನಗೆ ಹೂಗಳ ಅಂದದ ಕಂಪನ್ನು
ತುಟಿಯಲ್ಲಿರಿಸಿಕೋ ಇನಿಯ ಬಾ ಸನಿಹ .

ಚೈತ್ರದ ಹೊಂಗನಸುಗಳಿಗೆ ಮುಂಗುರುಳೊತ್ತಿ
ಬೆರಳ ನಡುವಿನ ಬೆಚ್ಚನೆ ನವಿರು ಭಾವಗಳಿಗೆ
ಉಳಿಸಲಾರದ ಸವಿಬಿಸಿಯ ಕಾವಿಡುವಾಗ
ನೀನಿರು ಸನಿಹ ಬಾ ಇನಿಯ

ನೀಲಾಗಸದ ನಡುವೆ ಹಾರುವ ಹುಸಿ ಮೋಡಗಳ
ಅಲ್ಲಲ್ಲಿ ಚುಮುಕಿಸಿದ ಹನಿಯ ಅಪರೂಪದಾಟಕ್ಕೂ
ಮಳೆಯಾಸೆ ಎದೆಯೊತ್ತುತ್ತಾ ಇರಲೀ ತುಂತುರೆನ್ನುವಾಗ
ತುಟಿಯೊಳಗೆ ಹರಿವ ಹನಿಯಾಗಿರು ಇನಿಯ

ಬಿಸಿಯ ಗಾಳಿಗೆ ಸುತ್ತುವ ಧೂಳಿನ ಕೆಂಪು ಕಸಿವಿಸಿಯಲ್ಲೂ
ಹೃದಯದ ಶುದ್ದ ತಂಗಾಳಿಯ ಉಸಿರಾಟದೊಳಕ್ಕೂ
ಇನ್ನಷ್ಟು ಹತ್ತಿರಾಗುವ ಬಿಸಿ ಬಯಕೆಯಲ್ಲಿ
ನನ್ನೊಳಗಿನ ಆತ್ಮ ಮಿಲನೋತ್ಸವದಲೊಂದಾಗು ಇನಿಯ
೨ 
ಬಾಳ ಗೆಳೆಯ

ನಿನ್ನ ನೋಟದ ಜೇನಹನಿಯೊಳಗೆ ನನ್ನ ಬಾಳಿನ ಬಿಂದು
ಕರಗಿ ನಿನ್ನದೇ ಶಬ್ದ ಪ್ರತಿದ್ವನಿಸಿ ನಾನು ನೀನಾಗುವ ಆ ಸವಿ ಕ್ಷಣ
ಏಕದನಿ ನಾದವಾಗಿ,ನಿನಾದವಾಗಿ ಪ್ರೀತಿಯ ಉತ್ಸವವಾಗಿದೆಯಲ್ಲಾ
ಜೀವ ಹೂವಾದ ಇಬ್ಬನಿ ಮುತ್ತಿಟ್ಟ ರೋಮಾಂಚನದ ಈ ಗಳಿಗೆ

ಬಾನಿನಗಲೆತ್ತರಕ್ಕೂ ಕೆಂಪಿನೋಕುಳಿ ಗಲ್ಲದಲಿ ಹರಡುವಿಕ್ಕೆಲದ ಗುರುತು
ಒತ್ತಿ ಕೋಮಲತೆಯ ಮೃದು ಗಾನ ಹೊರದಡಿಸುವಾಗ ಪ್ರಭೆ ಅದ್ಬುತ ಕಾಂತಿ
ಪ್ರತಿನಿಮಿಷದ ಶಬ್ದವೂ ದೃಷ್ಟಿಯೊಳಗೆ ಕರಗಿ ಬಿಂಬದ ಒಳ ತಪಸ್ಸಾದಾಗ
ಬದುಕು ಮತ್ತೆ ನಿನ್ನೆಯ ಹುಡುಕಿ ಎತ್ತೆತ್ತರಕೆ ಬೆಳೆದು ತೊಳ್ತೆರೆಯಬಾರದೇ ನನಗೆ
೩ 
ಎದೆಯುತ್ತರ 

ನೀನಾಗು ನನ್ನೆತ್ತರಕ್ಕೂ ಹರಡುವoತಹಾ ಹಸಿರು 
ಪ್ರತೀ ಚಿಗುರಿನಲ್ಲೂ ,ಹೊಸ ತಲ್ಲಣ ಎದೆಗೆ 
ಪ್ರೀತಿಯ ಉಬ್ಬರದಲ್ಲೂ ಅಲೆಅಲೆಗೂ ಹರಡುವ 
ನಿಂತ ನೀರು ಹರಿವ ಪುಳಕವೆದೆಗೆ . 

ಎದೆಉತ್ತರವೇ ತುಮುಲಗಳ ಸೃಷ್ಟಿಸುತ್ತಾ 
ಪಸರಿಸಿದೆ ಮುಗುಳ್ನಗುವ ಮೊಗ್ಗುಗಳನು
ಕಂಬನಿಗೆ ಕೆನ್ನೆಯಿರಿಸಿ ಸಂತಸದ ಹನಿಯೇ?ಎಂದು 
ಹಸಿರು ಕೇಳುತಿದೆ ಉಸಿರೊಳಗೆ ಸೇರಿ . 

ಮಂಗಳವಾರ, ಜುಲೈ 2, 2013

ಹರಿದಾಸ ಹರಿದಾಸ

''ಶ್ರೀ ಪಾದರಾಜರ ಕೃತಿಗಳು ''
ಸಂಪಾದಕ ,ಡಾ .ವರದರಾಜರಾವ್
ಕನ್ನಡ ಅದ್ಯಯನ ಸಂಸ್ಥೆ
ಮೈಸೂರು ವಿಶ್ವವಿದ್ಯಾನಿಲಯ
''ಶ್ರೀ ಪಾದರಾಜರ ಕೃತಿಗಳು ''ಹರಿದಾಸ ಸಾಹಿತ್ಯದ ಈ ಶಾಸ್ತ್ರೀಯ ಆವೃತ್ತಿಯು ಸುಂದರವಾಗಿ ವಿನ್ಯಾಸಗೊಂಡಿದೆ ಹರಿದಾಸರಲ್ಲಿ ಮೊದಲಿಗರಾದ
'ಶ್ರೀ ಪಾದರಾಜರ ಕೀರ್ತನೆ ಗಳ ಸಂಪುಟ ,ಶ್ರೀ ಪಾದರಾಜರ ಜೀವನ ಕೃತಿಗಳನ್ನು ಕುರಿತ ವಿಸ್ತಾರವಾದ ವಿವರಣೆಯನ್ನೂ,ಸೂಚಿಗಳನ್ನೂ ,ಹೊಂದಿಸಲಾಗಿದೆ . ಇದುವರೆಗೆ ಪ್ರಕಟವಾಗದ ಕೀರ್ತನೆಗಳನ್ನು ಹೊಂದಿರುವುದೇ ಈ ಪುಸ್ತಕದ ವಿಶೇಷ . ಶ್ರೀ ಪಾದರಾಜರ ಜೀವನ ಪರಿಚಯ ,ಕೃತಿಗಳ ಅವಲೋಕನ ,ಶ್ರೀ ಪಾದರಾಜರ ಕೃತಿಗಳ ಸುಂದರತೆ ,ಪ್ರತೀ ಕೀರ್ತನೆಯ ಅರ್ಥ ,ಲಘು ಟಿಪ್ಪಣಿಗಳು ಪುಸ್ತಕದ ಸಂಗೀತ ಸವಿ ಹೆಚ್ಚಿಸಿದೆ .
ಸ್ವರ ಪ್ರಸ್ತಾರದ ವಿವರಣೆಯೊಂದಿಗೆ ಸಂಪೂರ್ಣವಾಗುವ ''ಶ್ರೀ ಪಾದರಾಜರ ಕೃತಿಗಳು''ಸಂಗೀತ ಪ್ರೇಮಿ ಗಳು ಮಾತ್ರವಲ್ಲ , ಎಲ್ಲರೂ ಓದಬೇಕಾದ ಪುಸ್ತಕ . ಕೀರ್ತನೆ,ರಚನೆಗಳೊಂದಿಗೆ ಈ ಸಾಂಸ್ಕೃತಿಕ ದಾಸ ಪರಂಪರೆ ,ದಾಸ ಶ್ರೀಮಂತಿಕೆಯಲ್ಲಿ ಜನಪ್ರಿಯವಾಗಿ ಜನರ ಬಾಯಲ್ಲಿ ಕೀರ್ತನೆಗಳಾಗಿ
ತಲೆಮಾರಿನಿoದ ನಿಂತಿವೆ . ದಾಸ ಸಾಹಿತ್ಯ ಈ ನಾಡಿನ ಶ್ರೀಮಂತ ಪರಂಪರೆ .