ಗುರುವಾರ, ಜೂನ್ 13, 2013

ಒಂದು ಕಡೆಯ ಮುಖ

ನಿರಂತರವಾಗಿ ದಿನದ ಚಟುವಟಿಕೆಗಳಲ್ಲಿ ತೊಡಗಿ ಬದಲಾವಣೆ ಬೇಕು ಎಂದು ತಿರುಗಾಡಲು ಹೋದಾಗೆಲ್ಲ ,ಮನೆಯೆಡೆಗೆ ತುಡಿವ ಮನಸ್ಸು ,ಈ ಸಹಸ್ರ ಬಣ್ಣಗಳ ಜಗತ್ತು ,ಹಸಿರಿನ ನಲಿವ ಕಾಡು ,ಬಗೆ ಬಗೆ ಸೇವೆಗಳು ರದ್ದಾಗಿ ,ಅದೇ ಮನೆಯಲ್ಲಿ ಓಡಿ ಕೆಲಸಗಳ ಗುಂಗಿನಲ್ಲಿ ಮರೆತ ವಿಷಯಗಳ ಪಟ್ಟಿಮಾಡುತ್ತ ,ಅಡುಗೆ ನಡುವೆ ಸುಳಿವ ಮಗುವ ಮುದ್ದು ಮಾಡುತ್ತಾ ,ಆಗಾಗ ಇಣುಕಿ ಟಿ .ವಿ ಮುಂದೆ ಕುಳಿತು ಮಿಂಚಿನ ಕಣ್ಣ ಪ್ರಶ್ನೆ ಕೇಳುವವರ ಮುಂದೆ ಸುಳಿದಾಡುವ ಹಂಬಲ ,ಮನೆಯಷ್ಟು ಸುಂದರವಾದ ಸ್ಥಳ ಯಾವುದಿದೆ ?ಧಾವಿಸಿ ಬರುವ ಜೀವಗಳಿಗೆ ಕಿರುನಗೆಯಲಿ ಬಿಸಿ ಚಹಾ ಕೊಟ್ಟು ,ಮತ್ತೇನು ತಿಂಡಿ ಬೇಕು ಎಂದು ಸುತ್ತಲೇ ತಿರುಗಾಡುವಾಗ ,ಹಿತದ ಪ್ರಶ್ನೆ ಉತ್ತರಗಳ ಜಲಪಾತ . 

ಎರಡನೇ ಮುಖ 

ಹೆಜ್ಜೆಗಳ ವೇಗ ಪಡಿಸಿ ಕಣ್ಣೀರ ಸುರಿಸುವ ಜೀವಗಳೆಡೆ ದಿನದ ತುಡಿತ ,ಒಂದು ಸಮಾದಾನದ ಮಾತಿಗೆ ಕಾದಿರುವ ಕಾಲು ಕಳೆದು ಕೊಂಡಿರುವ
ಹಲವು ಬೇಗುದಿಯ ಹೃದಯಗಳು ,ನೋವಿನಿಂದ ಕಂಗೆಟ್ಟ ಕಣ್ಣುಗಳು, ಊಟವಿರದೆ ಬಡಕಲಾಗಿ ಹಣದ ಮುಗ್ಗಟ್ಟಿನಿoದ ತತ್ತರಿಸಿ ,ನನ್ನ ಹಿರಿಯ ವೈದ್ಯರ ಬಡವರ ಧನದ ಭರವಸೆ ಸಿಗುವವರೆಗೆ ನಡುಗಿ ಜೀವಭಯದಿಂದ ನನ್ನ ಕೈ ಹಿಡಿದು ಸಾಂತ್ವನಕ್ಕೆ ಕಾದವರು , ಇವರನ್ನೆಲ್ಲ ಬಿಟ್ಟು ಅಗತ್ಯ ಇರುವಲ್ಲಿ ಸಲ್ಲದೇ ಹೇಗಿರಲಿ ,ಒಂದು ಪದದ ಆಸರೆ ಸಿಕ್ಕ ಕೂಡಲೇ ಕಂಬನಿಯಲ್ಲಿ ಕಿರುನಗು ತಂದು ,ಏನೂ ಆಗಲಾರದು ತಾನೇ ದೇವರಿದ್ದಾನೆ ಅನ್ನುವವರ ಬೆನ್ನ ಮೇಲೆ ಕೈಯಿರಿಸಿ ಸೇವೆಗೆ ಹೊಸ ಮುಖ ತೆರೆದು ,ಚೂಪು ಉಪಕರಣಗಳ ರಕ್ತದ ರಾಶಿಯಲ್ಲಿ ಮುಳುಗಿ ,ಮತ್ತದೇ ಜೀವನ ಎಂದು ಬೇಸರಗೊಳ್ಳದೇ ,ಇನ್ನೊoದು ಕೆನ್ನೆಯ ಹನಿಯನೊರೆಸಿ ,ಅಭಯದ ,ಭದ್ರತೆಯ ನಾಳೆಯ ಶುಭಾರೋಗ್ಯ ಕೋರುವ ಭಾಗ್ಯ .

ಈ ಬದುಕಿನ ಎರಡೂ ಮುಖಗಳು ಸಹ್ಯ ,ಸುಂದರ -ಇದರಾಚೆಗೂ ತುಡಿತ ,ಮಗಳಾಗಬೇಕು ಸೊಸೆಯಾಗಬೇಕು ,ಅತ್ತಿಗೆಯಾಗಬೇಕು ,ಸ್ನೇಹಿತೆಯಾಗಬೇಕು ,ಸಹೃದಯ ನೆರೆಯವಳಾಗಬೇಕು ,ಮೊರೆವ ದೂರವಾಣಿಗಳಿಗೆ ಸಹನೆಯ ಉತ್ತರವಾಗಬೇಕು .
ಬರಹದ ಅಸೆ ,ಓದುವ ಅಸೆ ,ಹಾಡಿನ ಅಸೆ,ಕಟ್ಟುವ ಕೋಟಿ ಕನಸುಗಳಿಗೆ ಜಗ ಮಾಡಿ ನಿಜವಾಗಿಸುವ ಹಂಬಲ . ಇದಕ್ಕೆಲ್ಲ ಶಕ್ತಿ ಸಮಯ ತುಂಬುವ
ಆತ್ಮವಲೋಕನ .
ಇದು ಸರಿಯೇ, ನಾನು ಇನ್ನೂ ಶಕ್ತಿವಂತಳಾಗಬಾರದಿತ್ತೇ , ಇನ್ನಷ್ಟು ಕೊಡಲು ..... ಮತ್ತಷ್ಟು ಪಡೆಯಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ