ಮಂಗಳವಾರ, ಅಕ್ಟೋಬರ್ 1, 2013

ಘನಶ್ಯಾಮ ನೀ ಬರಲು

ಘನಶ್ಯಾಮ ನೀ ಬರಲು 

ಮೋಹಕ ನೋಟದಲಿ ಬರಸೆಳೆವ ಘನಶ್ಯಾಮ ನೀ ಬರಲು 
ನಾ ಇರೆನು ನಿನ್ನ ಮಡಿಲಲಿ,ಮುನಿಸಾಗಿದೆ ಮೂಗ ತುದಿಗೆ,
ನೆನೆದ ದಾವಣಿ ತುದಿಯ ಬೆರಳಿಗೆ ಸುತ್ತಿಕೊಂಡು ಕಾದದ್ದು 
ಎಷ್ಟು ದಿನ ..... ಕಾತರದ ಹಲವು ಗಳಿಗೆ ...

ಸುರಿದಿಡಬೇಡ ಮೋಹನಾಸ್ತ್ರದ ಬಲೆಯ, ನನ್ನ ಬಳಸಿ,ಮುದ್ದಿಸಿ
ಒಲ್ಲೆ ಮುತ್ತನೂ,ನಿನ್ನ ಅಲಿಂಗನವನೂ,ನೀಲ ಮೈ ತಂಪನೂ,
ಹೋಗದಿರು ... ಮುನಿಸ ನೋಡುತ ಒರಗಿ ಬಿಟ್ಟಿರು ಕಂಭದ ತುದಿಗೆ
ಹೂ ಹಾರದ ತೋಳಲಿ ನಿನ್ನ ನಾ ನೋಯಿಸುವವರೆಗೆ

ನೋಡು ಕಣ್ಣ ತುದಿಗಿದೆ ನಿನ್ನ ಕಾದ ಕಾಡಿಗೆಯ ಭಾರದ ನೋವು
ಜಾರಿ ಬಾಡಿದ ಜಾಜಿ ಮಲ್ಲಿಗೆಗಳ ಎದೆ ಮಾಲೆ,ಮುಡಿಯ ಮೊಗ್ಗು
ಮುದುಡಿದ ರೇಸಿಮೆಗೆ ಹಾರಿದ ಸುಗಂಧದ ಹನಿಗಳ ಗಾಳಿಯಾಡಿಸುತ್ತಿರುವೆ
ಹಾಗೆ ಮುನಿಸನೂ ನಿನ್ನ ಪ್ರೇಮದೊಳಗೆ ಕರಗಿಸುವ ಮನಸು ಮಾಡುತ್ತಿರುವೆ

ಹುಣ್ಣಿಮೆಗೆ ಕಾಯುವ ಸಮುದ್ರದ ಹುರುಪಿಲ್ಲ ಅದರೂ ಅಮಾವಾಸ್ಯೆಯಲ್ಲ
ನಡುದಿನದೆ ಆವರಿಸು,ಸಮಯಗಳ ಪರಿವಿಲ್ಲ,ಪ್ರೇಮಕ್ಕೇನು ಪರಿಧಿ ಕಟ್ಟಿಲ್ಲ
ಬಿಡಿಸಿಡುತಿರುವೆ ಕಾಲಂದುಗೆ ಸರಪಳಿಗಳ,ಕೆನ್ನೆತಾಗುವ ಚಿನ್ನದ ಗೊಂಚಲ
ಬರಬಹುದಿಲ್ಲಿ ಪಾದ ನೆನೆಸುವೆ ಪನ್ನೀರಿನಿ೦ದ ಇನ್ನೂ ಮುನಿಸಿದೆ, ದೂರದಿಂದ ....

ವೇಣುಗಾನ

ವೇಣುಗಾನ

ವೇಣುಗಾನದ ಮಾಯೆಯಲಿ 
ಕಾಡಿನೊಳು ನಡೆದು ಹುಲ್ಲು ಹಾಸಿನಲಿ 
ಮೈ ಚೆಲ್ಲಿ,ದಿನವ ಮರೆತಾಗ,
ಹಸಿರು ಮಂಚದಲಿ ಹಾವುಗಳು ತೂಗಿ
ಫಲ ಪುಷ್ಪಗಳ ನಡುವೆ ಗಾನದಲಿ
ಮೈ ಮರೆತುದ ಕಂಡೆ,
ಶ್ಯಾಮಾ ನಾನಾವ ತೃಣವೋ
ನಿನ್ನ ಗಾಯನದ ಮೋಡಿಗೆ
ಸಿಲುಕದಿರಲು

ನೋವು

ನೋವು 

ನಿಟ್ಟುಸಿರಿನ ಬದುಕಿಗೆ 
ನಗುವ ಎಳೆ ಬರೆವ ಯತ್ನ 
ನಿರಾಸೆಯಲಿ ಕೊನೆಗೊಂಡಿದೆ 
ಇರಲಿ ಪಡೆದಿದೆಷ್ಟೇ .....

ಸಂತಸ

ಸಂತಸ 

ನಿನ್ನ ಉತ್ತರದ ಸಂತಸ ಭಾರ
ಹೆಚ್ಚಾಗಿ ಆಗಸದ ಮೋಡಗಳ
ಮರೆಯಲ್ಲಿ ಬಚ್ಚಿಟ್ಟುಕೊಂಡು
ಮಳೆಯ ಕರೆದಿದ್ದೇನೆ
ಸುರಿದು ಹಗುರಾಗಲು
ಜೊತೆಯಾಗಲೆಂದು

ಒಬ್ಬರಿನ್ನೊಬ್ಬರ ಒಳಗೆ

ಒಮ್ಮೆಯಿಡು ನೀ ಹೆಜ್ಜೆ ಈ ಜೇನವನದೊಳಗೆ 
ಸಿಹಿಯ ಸ್ನಾನದಲಿ ನಾಳೆ ಇರದಂತೆ ಈ ಒಸಗೆ 
ಮೊಗೆದಷ್ಟೂ ಪುಳಕ ರಸ ಸಮಯದ ಹೂ ಮಳೆಗೆ 
ತೋಳ ತಪ್ಪಿ ಉಸಿರಾಡಲಾರೆ ಒಬ್ಬರಿನ್ನೊಬ್ಬರ ಒಳಗೆ

ಪ್ರೀತಿ

ಪ್ರೀತಿ 

ತಪ್ಪಿಯಾದರೂ ನೋಡದಿರು ತುಟಿಗಳತ್ತ 
ಹೇಳಲಾಗದ ಮಾತು ಕೆoಪಿನಂಚಲಿ ಕುಳಿತು 
ಪಿಸುಗುಟ್ಟಬಹುದು ಮನದ ಸತತ ತಪನೆಯನ್ನು 
ತನ್ನೊಳಗೆ ಅಡಗಿದ ಕಲ್ಪನಾತೀತ ಒಲವನ್ನು ..

ಅಂಧಕಾರ

ಅಂಧಕಾರ 

ಬಹಳಷ್ಟು ಕನಸುಗಳಿತ್ತು ಗೆಳತಿ ನಮ್ಮ ನಡುವಿನ ಮಾತುಗಳಲ್ಲಿ 
ಅದನ್ನು ಬರೀ ಮಾತಾಗಿ ನೀನು ಕೊಲ್ಲಬಾರದಿತ್ತು ಈ ಎದೆ ಮೇಲೆ,
ತುಂಬು ವಾತ್ಸಲ್ಯದಲಿ ಹೃದಯದ ಒಳಗೆ ಕರೆದು ಸಂಬ್ರಮಿಸಿದ್ದೆ 
ಅದನ್ನು ನಿರಾಶೆಯ ಕತ್ತಲಿಗೆ ಒದ್ದು ದೂಡಬಾರದಿತ್ತು ನೀನು.

ಸರಿದು ಹೋಗುವ ಮನಸ್ಸು ನಿನಗಿದ್ದರೂ ನನಗೊಮ್ಮೆ ಹೇಳಬಹುದಿತ್ತು
ಪಾಶಗಳ ಹಿಡಿತ ಮೋಹದ ಬಂಧನಗಳ ತೊರೆವ ಗಟ್ಟಿತನ ಬರುವರೆಗೂ
ನಿಲ್ಲಬಹುದಿತ್ತು,ತೊರೆಯದೇ ನನ್ನನೀ ವಿವಶತೆಯೊಳಗೆ.. ದುಃಖಸಾಗರದೊಳಗೆ
ನಿಲ್ಲಲಾರೆ ನಾನು.. ಇನ್ನೂ ಬಹಳ ದಿನ ನೀನು ಕೊಟ್ಟಿರುವ ಪೆಟ್ಟಿಗೆ..

ಗಾಯಗಳ ಮಾಯಿಸಲು ಔಷಧಿಗಳ ರಾಶಿ ಮುದ್ದಿನ ಮುಲಾಮುಗಳ ಪಟ್ಟಿ
ಹೊತ್ತು ನಿಂತ ಹೃದಯಗಳ ಕಣ್ಣ ಬೆಳಕ ಬೇಡವೆನಲಾರೆ,ಎಲ್ಲವನೂ ಮೀರಿ
ಘಾತಿಸುವ ನಿನ್ನ ಪರಿಯ ಹೊರಲಾರೆ,ಇಳಿಸಲಾರೆ,ಒಣಗಿಸಲಾರೆ ಕಂಬನಿ
ಏಕೆ ಹೀಗೆ ಗೆಳತಿ ?ಪೂರ್ಣಫಲಕೆ ಅರ್ಹಳಲ್ಲವೇ ನಾನು ?

ದುಗುಡ

ದುಗುಡ 

ಬೇಡದ ಬೆಳದಿಂಗಳ ಸುರಿಸಿ ಏಕೆ ಹೊರಡುತಿರುವೆ 
ಆಗಸದ ಮರೆಗೆ ?ನಿನ್ನ ಕೆನ್ನೆಯಲಿ ಇನ್ನೂ ನಿದ್ರೆಯ ಪರದೆ 
ಬೇಸರದ ಛಾಯೆಯ ಬೆಳಕ ಬೇಡಲಿಲ್ಲ ನಾನು 
ಕತ್ತಲಿಗೆ ಕಣ್ಣು ಹೊಂದಿದೆ ಬಿಟ್ಟು ಬಿಡು ನನ್ನನು

ಲಹರಿ

ಲಹರಿ 

ನಿನ್ನ ಲಹರಿಗೆ ಎದೆ ಹಿಗ್ಗುತ್ತದೆ ಇನಿಯಾ ಬಾ ಸನಿಹ 
ಕಂಗಳ ಬೆಳಕಿನಲಿ ಬರೆದುಕೊಂಡೆ ನಿನ್ನ ಮುದ್ದಿನ 
ಪಾಠಗಳ, ಪಾದಳಾಡಿದವು ನಿನ್ನ ಕಾಲ್ಬೆರಳ ಹಬ್ಬ 
ಕನಸುಗಳಿರುವ ನನಸಿಗೆ ಮತ್ತೊಂದು ಮುತ್ತಿಡುವೆ 
ಇದ್ದು ಬಿಡು ಇನ್ನಷ್ಟು ಸನಿಹ,ಮತ್ತಷ್ಟು ಸನಿಹ

ಗುರಿ

ಗುರಿ

ನಡೆದಾಡುವ ನಾಯಕನ ಮನಸಿನ ಮುಂದೆ ಸೈನಿಕ ಭಾವ 
ಹೊಡೆದಾಡುವ ಬಾ ಆ ಗುರಿಗೆ ಎಂದು ಚೂಪಿನ ಕಣ್ಣಿನ 
ಯುದ್ದಾಸ್ತ್ರವ ಅರಳಿಸಿ ಹೊಡೆದದ್ದೇ ತಡ ಹಿಂದೆ ಸೇನೆ 
ಮುಂದೆ ನೂರು ದಾರಿಗಳು ಧಾವಿಸು ದೃಢ ಮನದೆ ...

ನಾವಿರದೇ ಹುಟ್ಟಿದ ಸ್ನೇಹ



ನಾವಿರದೇ ಹುಟ್ಟಿದ ಸ್ನೇಹ

ತುಂಬು ಕತ್ತಲೆಯಲ್ಲೂ ಕೆಲಸ ಮಾಡುವ ನನ್ನ ಕಣ್ಣುಗಳು ಹೇಳುತ್ತಿವೆ
ನೀನೂ ಕತ್ತಲೆಯಲ್ಲೂ ಗಮನಿಸುತಿದ್ದೀಯಾ ಆಗು ಹೋಗುಗಳನ್ನು
ನಿನ್ನ೦ತೆಯೇ ನಾನೂ ಬಲ್ಲೆ ಬೇಕು ಬೇಡಗಳನು, ಕೈ ಹಿಡಿದ ಬೆಸುಗೆಯನ್ನು
ಈ ಹಸ್ತ ಲಾಘವ,ಹೃದಯದ ಭಾಷೆ,ನಾವಿರದೇ ಹುಟ್ಟಿದ ಸ್ನೇಹ ದೈವ ಸಮ

ಗಾಂಧೀಜಿ

ಗಾಂಧೀಜಿ 

ತಿರುಗದೇ ನಡೆದವರ ಹಿಂದೆ 
ನಡೆಯುತ್ತಲೇ ಜೀವ ಕೊಟ್ಟವರು 
ಅಹಿಂಸೆಯ ಪಾಠ,ಸತ್ಯದ ಚಾವಟಿ 
ಹಿಡಿದು ಇಂದನ್ನು ತಂದಿತ್ತವರು
ಅಂದಿಗೂ ಇಂದಿಗೂ ಎಂದೆಂದಿಗೂ
ಮಹಾತ್ಮರು ..... ಗಾಂಧೀಜಿ

ಇದೇನೋ ಹೊಸ ತರ

ಇದೇನೋ ಹೊಸ ತರ 

ರಾತ್ರಿ ನಿದ್ರಿಸುವಾಗ ಹೆಚ್ಚಾದ ಪ್ರೀತಿ ಬೆಳಿಗ್ಗೆಗೆ ಬ್ರಹಾಂಡ ಬೆಳೆದು 
ಎದೆ ಭಾರವಾಗಿ ನಿಂಗೆ ಹೇಳುವ ತನಕ ಹಗುರಾಗದ್ದು ಹುಚ್ಚಾ ,
ನೀನೂ ಹೊರಳಿ ಹೊರಳಿ ಬೇಡಾದನ್ನೆಲ್ಲ ಯೋಚಿಸಿ ನಕ್ಕದ್ದು 
ಆಗಾಗ ನನ್ನ ತೊಳ್ತುಂಬಿಸಿಕೊಂಡು ಮುದ್ದಿಸಿ ಬಂದೆ ಅಂದದ್ದು ಸುಳ್ಳಾ