ಶುಕ್ರವಾರ, ಆಗಸ್ಟ್ 30, 2013

ನೀನು

ಇದ್ದವರಾರು ?ನಾನಲ್ಲವೆಂದರೆ 
ಈ ತೋಟದ ಒಂದೇ ಹೂವು 
ಅರಳಿದ್ದು ನಿನ್ನ ಕೈಗೆ ... 
ಮತ್ತಷ್ಟು ಮೊಗ್ಗಿನ ಸುವಾಸನೆಯ 
ಏಕೆ ತೆರೆದು ಕೊಂಡೆ ?
ನಾನಿಲ್ಲವೆಂದೆ?

ಸರಸ

ಬುದ್ದಿವಂತಿಕೆಯ ಮಾತುಗಳ ಆಡಲಿಕ್ಕೆ 
ನೂರು ವೇದಿಕೆಗಳಿವೆ ನನಗೆ 
ಇದೇನಿದ್ದರೂ ನನ್ನ ನಿನ್ನ ನಡುವೆ 
ಇಲ್ಲಿ ಹೃದಯದ ಆಳ್ವಿಕೆ 
ತೋಳು ತುಟಿಗಳಿಗೆ ಪದವಿ 
ಹೂ ಮುತ್ತಿಗೆ ಆಗ್ರಸ್ಥಾನ
ಕೊರಳ ಹಾರಕ್ಕೆ ಈ ಬೆರಳು
ಕಾಲು ಸೋಕಲು ತುಡಿವ ಮೈ
ಮುಖದ ತುದಿಗೆ ಕೂದಲ ಕೆನ್ನೆ
ಕೆನ್ನೆಮೇಲೆ ಮೂಗಿನಂಚು
ಕಣ್ಣಿನಲಿ ಸುಳಿಮಿಂಚು
ಸುತ್ತುವ ಮುತ್ತಿಗೆ ಕುತ್ತಿಗೆ ಸಿಹಿ
ನವಿರು ಕಂಪನಗಳ ಶಕ್ತಿ ಯಾತ್ರೆ
ನನ್ನನೊರಗಿಸಿ ತಂಪಾದ ನಿನ್ನ
ಮಾತುಗಳ ಅಮೃತ ಧಾರೆ ...

ಮಿಲನ

ಎಲ್ಲಿದ್ದರೂ ಚಂದಿರ ಬರುವ ಮೊದಲೇ ನನ್ನೊಳಗೆ ಸೇರಿಬಿಡು 
ಸೂರ್ಯನಿರುವ ತನಕ ಹೊರ ಬರದಿರು ,ಚಂದ್ರನೆದುರೂ .. ಅಪ್ಪು 
ಎಲ್ಲಿದ್ದರಲ್ಲಿ ಸತತ ಮಿಲನ ,ಬಾನ ಹಾಸಿಗೆಗೆ ನಕ್ಷತ್ರದ ಹೂ ತೋರಣ 

ಮೀಟಿದೆಡೆ ರಾಗ ಹೊರಡಿಸುವ ಮೊದಲೇ ನಿನ್ನ ಬಳಸು ಹಾಡಿನ ಒತ್ತ್ತು 
ಭಾರದ ನಿಟ್ಟುಸಿರಿಗೆ ತುಟಿಗಚ್ಚುವ ಹಸಿ ಹಸಿ ಮುತ್ತು .. ತೆರೆದಲ್ಲಿ ಸ್ತಬ್ದ 
ಉಸಿರಿರದ ರೋಮಾಂಚನದ ಗಳಿಗೆಗಳು ,ತುಂಬು ಪ್ರೀತಿಯ ದಿನಗಳು

ಉಸಿರು

ಉಸಿರು 

ನಿನ್ನ ಪ್ರಾಣಾಯಾಮದಲಿ 
ಒಳಗೂ ಹೊರಗೂ ಓಡಾಡಿ 
ಸುಸ್ತಾದೆ ನಾನು ,
ಈಗ ನಿನ್ನ ಯೋಗ ಮ್ಯಾಟಿನ
ಮೇಲೆ ಮಲಗಿ ಹಿತ
ಇನ್ನು ಏಳುವುದಿಲ್ಲ

ನನ್ನ ಪ್ರಭು

ನೀ ಉಸಿರಾಡದಿರು ಅಂದಾಗಲಿಂದ ದಮ್ಮುಗಟ್ಟಿದ್ದೇನೆ 
ಈ ಕೃತಕ ಉಸಿರಾಟದಲ್ಲಿ ... ಬಡಿಯುತ್ತಿದೆ ಹೃದಯ ..ಶಬ್ದಿಸಿ 
ಮರಗಟ್ಟಿದ ಮೆದುಳಿನ ಸ್ಪರ್ಶವಿಲ್ಲದ ನರದ ಮರ್ಮರಕೆ 
ಪೆಟ್ಟು ಕೊಟ್ಟು ಅಲ್ಲೇ ಇರಗೊಟ್ಟಿದ್ದೇನೆ.. ಶಬ್ದ ಮಾಡಬೇಡ 
ಒಂದಿನಿತೂ ,... ಅಪ್ಪಣೆಯಾಗಿದೆ ಪ್ರಭುವಿನದೆಂದು

ಕಾಯುವಿಕೆ ..ನಿನಗಾಗಿ

ವರುಷಗಳು ಕಳೆದು ಎದೆಯೊಳಗೆ ನೋವಾಗುವುದು ಮತ್ತೆ 
ಇನ್ನೂ ಉಳಿದಿರುವ ಸಾಕ್ಷಿಯೇ ಇದು ನವಿರುತನದ ಸೊಬಗು 
ನಿಂತಲ್ಲಿ ಕಣ್ಣು ಒಣಗಿ ನಿತ್ರಾಣದಲಿ ಕುತ್ತಿಗೆ ಶಕ್ತಿ ನಿಲ್ಲದ ನೋವು 
ದಟ್ಟಛಾಯೆಯಲಿ ನಿಟ್ಟಿರುಳ ಸದ್ದು ..ಇದು ಸೂಚನೆಯೇ ..

ಪ್ರಿಯನ ಸನಿಹ

ತೀರದ ಕಷ್ಟಗಳ ಹೆದರದಿರು ನಾಳೆಗೆ ಹೋಗಿಬಿಡುವುದಿದು 
ಎಂದು ಬೆನ್ನು ತಟ್ಟಿ ತಲೆ ನೇವರಿಸುವ ಈ ಕೈ ,
ನಿನ್ನ ಕಂಡಾಗ ಓಡಿ ಬಂದು ಬೆಟ್ಟವನ್ನ ಅ೦ಗೈಯಲ್ಲಿಡು ಎಂದು 
ಹಟದಲ್ಲಿ ಮುದ್ದುಗೆರೆಯುವುದೇಕೆ ?ನನಗೇ ನಗು ನನ್ನ ನೋಡಿ

ನಿನ್ನವಳಾಗಿಸಿಕೋ

ನೀನಿರದ ನನ್ನ, ಕಲ್ಲೆಂದು 
ನೀರೊಳಗೆಸೆದಾರು 
ಕೈಗೆತ್ತಿಕೋ ಬೇಗ 
ಮೃದು ಸುಮವಾದೇನು

ವಿರಹ

ಇಲ್ಲೇ ಇದೆ 
ಅಂದದ್ದು 
ಹೋದ ಮೇಲೆ 
ನೋಡಿರಬೇಕಿತ್ತು 
ಎನ್ನುವ ದುಃಖ

ನಾವಿಬ್ಬರೂ

ಹಸಿರು ದಾರಿಗಳಲಿ ಕಣ್ಣ ಸೇರಿಸುವಾಸೆ 
ನೀರ ಹನಿಹನಿಯಲ್ಲಿ ಹನಿಯಾಗಿ ಸೇರುವಾಸೆ 
ಪಯಣದ ಹೂ ಆವೇಗದಲಿ ಬೆಟ್ಟದ ಬೆಟ್ಟದಾಸೆ 
ನೀನಿರದಲ್ಲಿ ನಿನ್ನ ನನ್ನೊಳಗೆ ಹೊಂದುವಾಸೆ

ಹೇಗೇ ಇರು

ನೀನು ನೀನಾಗಿರು ,ನಾನು ನಾನಾಗಿರುತ್ತೇನೆ 
ಪ್ರೀತಿಗೇಕೆ ತಿದ್ದು ತೀಡಿಕೆಯ ಒಪ್ಪ ?
ನೀ ಕೊಡುವ ಅಪ್ಪುಗೆಗೇಕೆ ಈ ಕಪ್ಪ ?
ಇದ್ದು ಬಿಡು ಇದ್ದಲ್ಲೇ ಹೇಗೆಂದರೆ ಹಾಗೇ 
ನಿನ್ನೊರಟು ,ಮೆದು,ಸವಿ,ಸರಳ ಎಲ್ಲ ಪ್ರಿಯವೆನಗೆ 
ನಿನ್ನ ನನ್ನ ಒಳಗೆಂಬ ಕಾತರದಿ ಈ ತಪ್ಪು
ಹಾರಿ ಚುಚ್ಚಿರಬಹುದು ಸ್ವಲ್ಪ ... ತಾಳಿಕೋ
ಒರಟು ಮುತ್ತಿನಂತೆ .....

ಒರಟು ನಾನು

ನಿಮ್ಮ ಹೂಮನದ ಅನಿಸಿಕೆಗಳು 
ನನ್ನ ಹೂ ಬನದ ಮೊದಲ ಗಿಡ 
ನಂಗೋ ಕಾಡು ಬಳ್ಳಿಯ ಮುಳ್ಳಿನ ಗತ್ತು 
ರಕ್ತ ಸುರಿಸಿಧಷ್ಟೇ ಗೊತ್ತು ... 
ಓಡ್ದರಿಗೇಕೆ ಹೂ ಗುಚ್ಹ .. ನಡೆಯಲಿ 
ನಿಮ್ಮ ಮೃದು ಸಂವಾದ

ಇರಲಾರೆ

ತಿದ್ದಿ ತೀಡಿ ಬರೆದು ಕೊಂಡ ನನ್ನ ಚಿತ್ರದ ಮೇಲೆ ನೀರು ಸುರಿದ ಪ್ರಿಯನೇ 
ತಂದು ಬಿಡು ಹೊದೆಯಲೊಂದು ವಸ್ತ್ರ ಮತ್ತು ಗಾದಿ 
ಕನಸು ಧಾವಿಸುತ್ತಿದೆ ಎದೆಯೊಳಗೆ .... ಮಾಡುತ್ತಿದೆ ಅಡಾಹುಡಿ 
ಉರುಳಿದರೆ ಗಮ್ಮತ್ತಿಲ್ಲದ .. ಸುರುಳಿಗನಸು ಹಾದು 
ನನ್ನ ನಿನ್ನ ನಡುವೆ ಬೇಡಿರದ ಮದ್ದಿನ ನಿದ್ದೆ ....ಕಾಟ 
ಸವಿದುಬಿಡು ಇಲ್ಲೇ ನೀರಾದ ಬಿಳಿ ವಸ್ತ್ರದ ಚೆಲುವ ..
ಅದನೂ ಬಿಟ್ಟು ಹೋಗಬೇಕಿದೆ ಕೋಟೆ ಕನಸ ಹಿತ್ತಲಿಗೆ
ಬೇಕಾದಂತೆ ಮೈಚಾಚಿ ಹೂವುದಿರಿಸಿಕೊಳ್ಳಲಿಕ್ಕೆ ...

ಪ್ರಣಯ

ಅಲ್ಲೂ ಇರದೇ 
ಇಲ್ಲೂ ಬರದೇ 
ಅಲ್ಲೋಲ ಕಲ್ಲೋಲ 
ಮಾಡಲಿಕ್ಕೆ ನೀನು
ಪ್ರಳಯವೇ .... 
ನನ್ನ ,
ಪ್ರಣಯವೇ .

ಮೈದುಂಬು

ಅಮೃತ ಕುಂಭದ ಹಾಗೆ ಗಳಿಗೆಗೊಂದು ಜೀವ ನದಿ ಹುಟ್ಟಿಸಿ ಆಯಸ್ಸು ಹೆಚ್ಚಿಸಬೇಡ ಈ ಕೊರಗಿನ ಮೈಯನ್ನ 
ಸೇರಿಸಿಕೊಂಡರೆ ಸಾಕು ನಾಲೆ ಬದಿ ತೊರೆಗೆ ... ಎಂದೂ ಸೇರುವೆ ಸಮುದ್ರವನ್ನ ........ 
ನಾನೇನು ವಜ್ರದ ತುಣುಕಲ್ಲ ಬಲ್ಲೆ .. ಬರೀ ಉಪ್ಪಿನ ಹರಳೇ ,ಅದರೂ ನಿನ್ನೊಳಗೆ ಕರಗುವ ಹುಚ್ಚು ಬಿಡಲಿಲ್ಲ 
ಒಣಗಿದ ನಾಲಿಗೆಯಡಿ ಖೇಚರಿ ಕನಸ ಕಾಣುವ ಉಪ್ಪಿನ ನಾಲಿಗೆ ಕೊರೆತದ ಮೆಲ್ಲನೆ ಕತ್ತರಿಸುವ ಚೂಪಲ್ಲ ನಾ 
ನಿನ್ನ ಬೆನ್ನಡಿಯ ಕುಂಡಲಿನಿ ಬಳಸಿ ಸರ್ಪನಿದ್ರೆ ಹತ್ತಿ ಅವರಿಸುವೆ ಹೃದಯ ಮುದ್ರೆಗೆ .ನಾಭಿ ತೆರೆದಾಗ ಅಲಿಂಗನ 
ಮೈ ಬಿಟ್ಟಾಗ ಪೊರೆ ..ತೊರೆದಾಗ ಸರ್ವಾಂಗ ಸ್ನಾನ ... ಹೋಗುವೆಯೆಲ್ಲಿಗೆ ಬಿಟ್ಟೂ ಬಿಡದೂರಿಗೆ ಬಿಗಿನಡೆಯಲ್ಲಿ ..
ವಿಷವೆಂದೆಡೆ ಇರದ ಅಮೂಲ್ಯ ಮಣಿ ಕಾoತಿಯೇ ಸೇರು ನನ್ನೊಳಗೆ ಬೆಳಕ ಬತ್ತಿ ಹತ್ತುರಿಯಲು ನೀ ಬಳಸಿದಲ್ಲಿ
ಬಂದದನ್ನೆಲ್ಲ ಎದೆ ಪಾತಾಳದಲಿ ಕರಗಿಸಿ ಕೊಳೆಯುವ ಮೊದಲೇ ಅರ್ಪಿಸಿಬಿಡು ನಾಳೆ ನೈವೇದ್ಯಕ್ಕೆ ಒಂದೇ ಎಡೆ ಹಾಕಿ ....

ಒಲವಿನ ಗುಟ್ಟು

ನೇರ ಸರಳ ಅಂದು ಕೊಂಡೇ ಗುಟ್ಟು ಮಾಡಿ 
ಎಕೋ ಬಚ್ಚಿಡುತ್ತಿ ನಿನ್ನ ?
ಹುಡುಗರಿದ್ದಾಗ ಆಡಿದ .. 
ಕಣ್ಣ ಮುಚ್ಚಾಲೆ ಸಾಕಾಗಲಿಲ್ಲವೇ ?

ವಾತ್ಸಲ್ಯ

ನಿಶ್ಯಭ್ದದ ಅನುಭೂತಿಯಲ್ಲಿ ಹೊಂದಿದ್ದೇನೆ 
ಪ್ರಖರ ಬೆಳಕು ಗರ್ಭದೊಳಗೆ ಮಿಡಿಯುವುದನ್ನ 
ನಿರಾತಂಕದ ಆನಂದ ,ಮೊಲೆಯೂಡುವ ಹಿತದಂತದ್ದು

ಅಗ್ನಿ ನಕ್ಷತ್ರ

ಮೂರು ಆತ್ಮಗಳೇ ಸೇರಿಕೊಳ್ಳಿ ಒಂದೇ ದೇಹದಲ್ಲಿ 
ಏಕೆ ಜಗವಿಲ್ಲವೇ ? ನಿಮಗೇಕೆ ಆಕಾರದ ಭಾವ 
ನಿರಾಕಾರಿಯಾದರೂ ಸಾಲದೇಕೆ ಅಸ್ತಿತ್ವದ ತತ್ವ 
ಹೊಕ್ಕಿ ಬಿಡಿ ನೋಡುವ ಮತ್ತೆ ... ಹೇಗಿರುತ್ತದೋ ... 

ನನ್ನ ಅತ್ಮವೇಕೋ ದೇಹ ಬಿಟ್ಟು ಬರುತ್ತಿಲ್ಲ ಛೇ ಮಮಕಾರ
ನಡೆ ಹೊರಗೆ ಸುಟ್ಟು ಬಿಡುವೆ ನಿನ್ನ ಪ್ರೇಮ ಪಾಶಗಳ ಬಂಧವ
ಚಿತೆಯಗ್ನಿಯ ಮೇಲೆ ಮಲಗಿದಾಗಲೂ ಒಳಗೇ ಕೂತು ಗೋಗೆರೆಯುವ
ನಿನ್ನ ಮಕ್ಕಳಾಟಕ್ಕೆ ... ಹೆಬ್ಬಂಡೆ ನಾನು ಅಗ್ನಿ ನಕ್ಷತ್ರ ...

ವಿರಹಾ

ಅತ್ತಿತ್ತಲುಗದೇ ನಿನ್ನ ನೋಡಲಿಕ್ಕೆ 
ಇನ್ನೊoದೆರಡು ಸಂಚಾರಿ ಕಣ್ಣು ಬೇಕಿದೆ

ಪ್ರೀತಿ

ಪ್ರೀತಿಯೊಂದೆ ಸತ್ಯ ಮುಗ್ಧ ಹೃದಯವೇ 
ಪೀತಿಯೇ ದೇವರು ,ಎಲ್ಲ ಧರ್ಮದ ತತ್ವ 
ಜೀವನ ಸರಳವಾದಷ್ಟೂ ಸುಂದರ ,ಸುಲಭ 
ಸತ್ಯ ,ನಿಜ ,ಆತ್ಮ ಸ್ಥೈರ್ಯದ ಬದುಕು ಸಾಕು 
ನಾವು ಸಾಮಾನ್ಯ ಜನ ಅಸಮಾನ್ಯರು

ಬೆರಸಿಕೋ ಅರ್ಧ ದೇಹದೊಳಗೆ

ಅರ್ಧನಾರೀಶ್ವರನ ಶಕ್ತಿಯ ಬಲಾಬಲ 
ತಾಂಡವದ ಕೊನೆಗೆ ಸೇರಿದ ಶಬ್ಧವೋ 
ನಿನ್ನ ಮೋಹಿನಿ ಭಸ್ಮಾಸುರನ ಮಾಯೆಯೋ 
ಮುಕ್ಕಣ್ಣಿನ ಕೋಪವೋ ,ಅಂಗೈನ ಡಮರುಗವೋ ?
ಸತಿಯ ಚಿತಾಭಸ್ಮದ ಮೈನಡುಗುವ ಪ್ರೇಮವೋ ?
ಪಾರ್ವತಿಯ ಏಕಾಂತದಲೂ ತೊಟ್ಟ ಗಂಗೆಯೋ ?
ಹೇಳು ಭಸ್ಮವಾದರೀಗ ನಿನ್ನ ಮೈದು೦ಬುವುದು ನಾ..

ಸೆಳೆದು ಬಿಡೊಮ್ಮೆ

ಹಗಲು ರಾತ್ರಿಗಳಿರದ ಈ ನಿದ್ರಾ ಸ್ನಾನದಲ್ಲಿ ತೊಳೆದು ಹೋಗಿದ್ದು 
ಬೇಡದ ಭಾವಗಳಷ್ಟೇ ನನ್ನ ಪ್ರಜ್ಞಾ ಆಜ್ಞಾದಲ್ಲಿ ಧರಿಸಿದ ಸಂಜ್ಞೆ 
ಗೆರೆ ಹಾದು ಒಳಗೆ ಚಲಿಸಿದ್ದು ನೀಲಮಣಿ ಸತ್ಯ ನೇರಳೆ ಬೆಳಕೇ ..... 
ನಿನಗೇಕೆ ಬಟ್ಟೆ ತೊಟ್ಟಡವೆಯ ಗೊಡವೆ ?ಅಂತರಂಗದ ಹಸಿವ ,
ದೇಹವನಪ್ಪಿ ದಾಟಿ ಹೋಗುವ ಅವಸರದಲಿ ವಿರಮಿಸು ಅಗ್ನಿಯೆದೆಗೆ 
ಪ್ರೇಮದ ಗುರುತಿಗೆ ಇಟ್ಟ ಮನ ಭಾವಗಳ ನಿನ್ನದೇ ಚಿತ್ರ ಹರಿದು
ಮನೋವಾಂಛೆಯಲಿ ಸುಖಿಸಿದ್ದು ಮನವೋ ದೇಹದ ನನ್ನತನವೋ
ರಕ್ತ ನರಗಳಾದರೆ ಸೇರಿ ಹಿನ್ನಡೆದಿದ್ದು ಈ ಅವತಾರದ ಸ್ಪಷ್ಟ ನೆರಳು
ಬಯಕೆಗಳ ಸರಿಸಿ ಕರಗಿ ಐಕ್ಯವಾಗುವಲ್ಲಿ ಚಕ್ರವೇ ಸುತ್ತದಷ್ಟು ನಾ ನಿನ್ನೊಳಗೆ
ಎಪ್ಪತ್ತೆರಡು ನಾಡಿಗಳ ಕುಂಡಲಿ ಬರೆದು ಚಕ್ರಾಧಿಪಥ್ಯದ ಪ್ರಭುವಾದೆ
ನನ್ನನಾಳುವ ಇಹಪರದ ಪ್ರಜ್ಞೆ ಗೆದ್ದೆ ,ಸಾಕ್ಷಿ ಬೇಕೇನು ಸುಪ್ತಾವಸ್ಥೆಗೆ ?
ಸೆಳೆದು ಬಿಡೊಮ್ಮೆ ಕೈ ಚಾಚಿ ವಾದಗಳ ವಿವಾದಗಳ ಗೊಡವೆಯಿರದೆ ...

ಗೆಳೆಯ

ಗದ್ದಲದ ಜಗದಲ್ಲಿ ಜನರ ನೂಕು ನುಗ್ಗಲಲ್ಲೂ 
ಕೈ ಹಿಡಿದಾಗ ತಿರುಗಿ ನೋಡಿದ್ದಕ್ಕೆ ಧನ್ಯವಾದ 
ಶಬ್ಧಗಳಿರದಲ್ಲಿ ಧಾವಿಸುತ್ತಿದ್ದ ನಿನ್ನ ಎಳೆದು 
ಮಾತಿನ ಕೋಟೆಯಲಿ ದಣಿಸಿ ಬೋರ್ಗೆರೆವ 
ನನ್ನೊಳಗೂ ಮೌನದ ಯುದ್ಧ ಸತತ ..
ಎದೆ ಸೋತ ಒಂದು ಸಂಜೆ 
ಗುರುತಿರದ ದಾರಿಯಲಿ ದೂರ ನಡಿಗೆ 
ಮತ್ತದೇ ಹಳದಿ ಹೂಗಳ ಹಾಸಿಗೆಗೆ ಪಾದ ಸ್ಪರ್ಶ 
ಆಡುವ ಮಕ್ಕಳ ಸಿಹಿ ದನಿ ,ಉತ್ತರಗಳ ನಗು 
ತಂಪು ಮರದ ಹಸಿರು ಹಾಸು ಮನದ ಹಿಂದೆ 
ಎಲ್ಲೋ ಕುಳಿತಿರುವ ಬಯಕೆ .... 
ಮತ್ತೆ ಮರಳಲೇ ಬೇಕೆಂಬ ಬೇಸರ .....
ವರಲಕ್ಷ್ಮಿ
ಈ ಕರಗಳಲ್ಲಿ ಅಲಂಕರಿಸಿಕೊಂಡ ವರಲಕ್ಷ್ಮಿ 
ಮುದ್ದಾಗಿ ಮಲ್ಲಿಗೆ ಹಾರದಲಿ, ಸಂಪಿಗೆ,ದಾಸವಾಳ ,
ಕನಕಾoಬರಗಳ ಮುಡಿದು ,ಸ್ಪಟಿಕ ಪಾರಿಜಾತದ ಹಾರ ,
ಹೂಬತ್ತಿ ,ಬಾಳೆಕಂಭದ ನಡುವೆ ಹಣ್ಣು ,ಸಿಹಿಗಳೊಂದಿಗೆ 
ರೇಶಿಮೆಯುಟ್ಟು ,ಹಸಿರು ಬಳೆ ತೊಟ್ಟು ನಸುನಕ್ಕಳು 
ಧೂಪಾರತಿಯ ನಡುವೆ ,ಪ್ರಸಾದ ಸಲ್ಲಿಸಿ ನಮಸ್ಕರಿಸಿದಾಗ
ಕೆಲಸಗಳ ನಡುವೆ ಹುದುಗಿದ ಸಿರಿಯನ್ನು 
ಕೈ ಚಾಚಿ ಮುಟ್ಟಿ ನೋಡಿದೆ , ಎಕೋ ಕದಲಲಿಲ್ಲ 
ಮಂದಿರದ ಅನ್ನಧಾತೋ ಸುಖೀಭವದ ಭಕ್ತಿಯಲಿ 
ಕಣ್ಣುಗಳು ಹೊಳೆಯಲಿಲ್ಲ ....... 
ಹಿಂತಿರುಗಿ ಬರುವಾಗ ನಸುನಕ್ಕೆ 
ಪ್ರಜ್ವಲಿಸುವ ಕಂಗಳಲಿ ಪ್ರೀತಿಯಿತ್ತು ....
ಈ ಸಂಜೆಗೆ ಬೆಳಕಿಲ್ಲವೆಂದು ನೀನೊಮ್ಮೆ ಹೇಳಬೇಕಿತ್ತು 
ಕತ್ತಲಿಗೆ ಪೋಣಿಸುವ ನಕ್ಷತ್ರ ಬರುತಲಿತ್ತು ... 
ಹನಿವ ಮೋಡದಿಂದ ಧಾರೆ ಧಾರೆ ಮಳೆಗೆ ಚಳಿ ಬಹಳ ,
ಸುಳಿವ ಗಾಳಿಯ ಸದ್ದಿಗೆ ಮನದ ಕಳವಳ ...
ನಾನು ಹೆಜ್ಜೆಯಿಟ್ಟಲ್ಲಿ ಹಳ್ಳವಾಗುವ ವರ ಕೊಟ್ಟ ಕಾಳಿ 
ನನ್ನನ್ನು ಹೊತ್ತು ತಿರುಗುವ ಪಲ್ಲಕ್ಕಿ ರಾಜ ಭಟರ ಎಲ್ಲಿಟ್ಟಿದ್ದಾಳೆ ?
ನೋಟವಿಟ್ಟಲ್ಲಿ ಭಸ್ಮವಾಗುವ ಮೂರನೇ ಕಣ್ಣ ಮುಚ್ಚಿ 
ಅಂತರಂಗವ ಪ್ರಕಾಶದ ಮತ್ತೊಂದು ಭುವಿಯಾಗಿಸಿದ್ದಾಳೆ... 

ತ್ರಿಶೂಲದ ಕೊನೆಗೆ ಚುಚ್ಚಿಟ್ಟ ಹಣ್ಣುಗಳ ಹುಳಿ ರಸ ಹೀರಿ
ಮತ್ತವಾಗಿ ನರ್ತಿಸತೊಡಗಿದ್ದಾಳೆ ಹೆಜ್ಜೆಯಲಿ ರಕ್ತ ಊರಿ ..
ನೆಲವ ಎರಡಾಗಿಸಿ ನುಗ್ಗಿ ಪಾತಾಳದಲಿ ನನ್ನ ತುಳಿದು ..
ಎದ್ದೆಯಾದರೆ ನೆಲೆಯಿರದ ನೆಲವೆಂದು ಬೊಬ್ಬೆಗೈದು ...
ಅನ್ನವಿರದ ದಿನ 
ಕವನ ಹುಟ್ಟಿದ್ದು 
ನೆನಪಿಲ್ಲ ..... 
ಅನ್ನವಿದ್ದೂ ಉಪವಾಸ 
ಮಾಡಿದಾಗ ಅಲ್ಲ ... ...
ಆ ದೇಶಗಳ ನೆಲದಲ್ಲಿ 
ನಾನು ಬರಿಗಾಲಲ್ಲಿ 
ನಡೆಯಲೇ ಇಲ್ಲ 
ಮಾತೃಭೂಮಿಯಲಿ 
ಸ್ವರ್ಗಮಯ ಪಾದಸ್ಪರ್ಶ
ನಿನ್ನೊಳಗಿರುವ ಸ್ವಾತಂತ್ರ್ಯದ ಹಿಡಿಕೆ 
ನಾನಾಗಲಾರೆ ,ಹಾರುವ ಹಕ್ಕಿಗೆ 
ಜಗವೇ ಮನೆಯಾದಂತೆ ... 
ನಿನ್ನಿರವ ಗಮನಿಸಿದರೂ ನನ್ನಂತಿರುವ .. 
ಸಹೃದಯ ನಿನ್ನಂತೆ ನನ್ನದೂ
ನಿನ್ನೊಳಗಿರುವ ಸ್ವಾತಂತ್ರ್ಯದ ಹಿಡಿಕೆ 
ನಾನಾಗಲಾರೆ ,ಹಾರುವ ಹಕ್ಕಿಗೆ 
ಜಗವೇ ಮನೆಯಾದಂತೆ ... 
ನಿನ್ನಿರವ ಗಮನಿಸಿದರೂ ನನ್ನಂತಿರುವ .. 
ಸಹೃದಯ ನಿನ್ನಂತೆ ನನ್ನದೂ
ಸತ್ಯ 
ಹೇಗಿದ್ದರೂ ನಿನ್ನೊಳಗಿರುವ ಪ್ರಭಾಪುಂಜವ
ಕಂಡು ಬೆರಗಾದ್ದನ್ನು ಮುಚ್ಚಿಡಲಾರೆ ... 
ಅದ್ಭುತ ಪ್ರಭೆಯಲಿ ನೀನಿರುವಲ್ಲಿ 
ದೀಪವಿರದೆ ಬೆಳಕು ಸೂಸಿದ್ದನ್ನು ಕಂಡಿದ್ದೇನೆ .
ಕಣ್ಣ ಹನಿಯಲೆಂದೂ .. 
ರಕ್ತವಿರದು ಎಂದುಕೊಂಡಿದ್ದೆ 
ಪ್ರಾಣವೇ ಹೋದಂತಿರುತ್ತದೆಯೆಂದು 
ಜೀವಜಲ ನಿಂತಾಗ ಅರಿತೆ
ಪ್ರೀತಿಸುತ್ತಿರುವುದು ಏನನ್ನ ನಾನು ?ನಿನ್ನ ಆಕಾರವನ್ನೋ ?
ನಿರಾಕಾರವನ್ನೋ ?ಹೆಸರನ್ನೋ ?ಭಾವವನ್ನೋ ?
ಉಕ್ಕುವ ಪದಗಳನ್ನೋ ?ತುಂಬಿದ ಸ್ವರವನ್ನೋ ?
ನಾಳೆ ಮೂರ್ತೀಭವಿಸುವ ಅದ್ಭುತ ಸಾಕಾರವನ್ನೋ .. 
ಅರಿಯೆ ... ಅದರೂ ನಾ ನಿನ್ನೊಳಗೆ ................
ಹೊಸರುಚಿಯ ಮೋಹ ಬಿಡಲೊಲ್ಲದು
ಅಡಿಗೆ ಮನೆಯ ಮಾಯೆಯಲ್ಲಿ ,
ಹೊಸ ಸವಿಗೆ ಮನ ಸೋಲುವ 
ನನ್ನಡಿಗೆಯ ನಾನೇ ಬಲ್ಲೆ
ಬೇಡವೆಂದು ತಳ್ಳಿದ್ದು ಗೊತ್ತಾದರೂ ಸುಮ್ಮನಿದ್ದೇನೆ 
ಬೆಪ್ಪಿ ಎಂದಲ್ಲ, ಪ್ರೀತಿ ಹಾಗೇನೆ ..... 
ಸಮಯದ ಅಬಾವ ಕಾಡಿಲ್ಲ ,ನಿಮಷಗಳ ಕರಕೆರೆಯಿಲ್ಲ 
ಬೇಡದ ಹುಚ್ಚಿ ಗೇಕೆ ತಲೆ ಕೊಟ್ಟು ಉಪದ್ರದ ಗೊಡವೆ ಎಂದು 
ತಿರುಗಿ ನೋಡದ್ದು ... ಬರೆದಕ್ಷರ ಹಳಸಿದಾಗಲೇ ಗೊತ್ತು 
ಆದರೂ ಕರಗಿದ ಸಕ್ಕರೆ ... ಜೇನು ..... ಹಿತದ ಸಿಹಿ .....
ನೋಡಿದಷ್ಟೂ ಹೆಚ್ಚಾಗುವ ನಿನ್ನ ಮಿಂಚಿನ ಕಂಗಳ ಬೆಳಕು 
ಇತಿಹಾಸದ ಎಲ್ಲ ಮಜಲುಗಳ ಬೆಳಕಿನ ವರ್ಷವ ಮೀರಿಸುತ್ತದೆ ಗೆಳೆಯ .. 
ಕಾಂತಿಯಲ್ಲಿ ಸಿಂಗಾರಗೊಳ್ಳುವ ಸೀರೆ ತುದಿಗೆ ನಕ್ಷತ್ರದ ಮುತ್ತುಗಳು 
ನಿನ್ನ ದೃಷ್ಟಿ ಸೋಕಿದ ಮೇಲೆ ... ಓಡಿ ಹೋದರೂ .. ನಾ ಬಂದಲ್ಲಿ ಬರುವ ..,
ನಾ.. ಹೊತ್ತು ತಿರುಗುವ ಅಂತರಂಗವಾಗಿದ್ದೀ ನೀ ನಿಜಕೂ ಹೊತ್ತೊಯ್ಯಿ ನನ್ನ
ಮುಳುಗಿದ್ದೇನೆ ಎದ್ದು ಬರದಾಳಕ್ಕೆ 
ಈಜು ಬರದು ,ಕಲಿಯುವಾಸೆಯಿಲ್ಲ ... 
ಒಮ್ಮೆ ಎತ್ತಿ ಬಿಡು ದಡಕೆ 
ಮತ್ತೆ ಮುಳುಗಲಾರೆ ಎಂದು ಹೇಳುವುದಿಲ್ಲ ...
ಮಿನಿ ಸ್ಕರ್ಟುಗಳಿಗೆ 
ಸ್ಲಿಟ್ಟು ಇರಬಾರದೆಂದ ನೀನು 
ತುಂಡು ಪಂಚೆಯವರ 
ಸಹಿಸಿದ್ದು ಸರಿಯೇ ?
ನೋಡಲೇ ಬೇಕು .... ನೋಡಲೆಂದು ಹತ್ತಿದ ಹಿಮಾಲಯದ ತುದಿಗೆ ನಿಂತು ನೋಡಿದೆ ,
ನೀನು ಅಲ್ಲಿರಲಿಲ್ಲ ..ನನ್ನ ನೋಡಲು ಸಮುದ್ರಕ್ಕಿಳಿದಿದ್ದೆ ........ 
ಇಬ್ಬರೂ ಧಾವಿಸಿದಲ್ಲಿ ಭೂಮಿ ಪ್ರಕೃತಿಯ ಹೂ ಹಾಸು ,ಬಾ ಈ ಸ್ವರ್ಗದೊಳಗೆ

ರಕ್ತವ ನಿಲ್ಲಿಸಿ ನಾಳೆ ಹರಿಯಲು ವೇಗ ಸಾಲದು ಹರಿ ಮೆಲ್ಲಗೆ ಎಂದಿದ್ದೆ 
ನರನರಗಳ ನಾಡಿ ಮಿಡಿಸದೆ ನೀ ನಿಂತು ಸ್ವರ ತುಂಬಿದ್ದೆ
ಹರಿವ ರಕ್ತದ ನರನರದ ಪುಳಕಕ್ಕೆ ಹೊಸ ರಾಗ ಸೇರಿತಿಲ್ಲಿ ಬಾ ಗಾನ ಸ್ವರ್ಗದೊಳಗೆ

ಹಿಮವ ಕೂಡಿಸಿ ತಂಪಿನಲಿ ನಡುಗಿ ನಿನಗಾಗಿ ಮೊಗ್ಗುಗಳನಿಟ್ಟೆ
ನೀ ಬಿಸಿಯ ಉಸಿರುಗಳ ಸೇರಿಸಿ ಹೆಬೆಯ ಶಾಖವಿತ್ತೆ ....
ಮೊಗ್ಗು ಅರಳಿದಾಗ ಈ ಬಿಸಿಯ ಸ್ಪರ್ಶಕ್ಕೆ ಘಮದ ಸುಖದಿ ಮತ್ತನಾಗು ಬಾ ಸ್ವರ್ಗದೊಳಗೆ
ಕಟ್ಟುತ್ತಿದ್ದೇನೆ ನನ್ನನ್ನ ,ನೋವಿನ ದೇಹದಲ್ಲಿ 
ಉಳಿಯದ ಅಚ್ಚಿನ ಗುರುತು ,ನಿಶ್ಯಕ್ತಿಯಾಗಿ 
ಕಾಣದಿರಲಿ ಎಂದು .... 
ಅಲ್ಲೆಲ್ಲೋ ಬೇರೆ ಹೆಸರಿಗೆ ನಾನೇ ಎಂದ 
ಕಾಯಿಲೆಗಳ ಹೊಸ ಹೆಸರ 
ಬರೆದಾಗ .... ನಾಳೆ ಎಂದು ?
ನಿಟ್ಟುಸಿರುಗೆರೆವ ನಿರ್ಮೋಹಿ -ಈ ದೇಹ ಕಟ್ಟಿಗೆಯಾಗುವರೆಗೂ ,
ಕಾಯುವುದೇ ಪ್ರವಾಹಗಳು ?ರಕ್ಥನದಿ ಜೀವಜಲಗಳು ?
ಸುಟ್ಟ ನಂತರ,ನಿತ್ಯ ಪಾಶದ ಕೊರಗ ಹುಟ್ಟಿಸಿ ಹೋಗುವುದೇ ? 
ಇಟ್ಟು ಬಿಡತ್ತ ಮೋಹದಿ ಎಳೆವ ಮಂತ್ರ, ನಿರ್ದೇಹಿ ಮೂಕನಾಗು
ಪುಸ್ತಕವ ಹೊಕ್ಕ ಮೇಲೆ ತಿಳಿದೆ 
ಅಕ್ಷರಗಳು ಕಾಣುತ್ತಿಲ್ಲ 
ಕಣ್ಣ ತುಂಬಿದ ಹನಿಯ 
ಮಂಜಿನ ಮುತ್ತಿಗೆ 
ಮುತ್ತಿಟ್ಟರೂ ಹೋಗುತ್ತಿಲ್ಲ .....
ಸೂರ್ಯ ರಶ್ಮಿ ಅದೇ ಬಾನಲ್ಲಿ ಬೆಳಗ ತೆರೆ 
ಸಂದೇಶದ ಹೊರೆ ಸಾಗಲಿ ಅಂಚೆಯಿರದೆ 
ನಿನ್ನ ಕಣ್ಣಿನಿಂದ ....... ತುಂಬಿದೀ ಮನದ 
ಪ್ರೇಮಾಶ್ರು ಧಾರೆ ಅವಿ ಮೋಡವಾಗಿ 
ಸುರಿಯಲಿ ನಿನ್ನ ಬಿಸಿಯಿಂದ ...
ಹುಲ್ಲಿನಾಸರೆಗೆ ಒರಗಿದ ಬೆನ್ನ ತುಂಬಾ ನಿನ್ನ ನೆರಳಿತ್ತು 
ಭಾರ ಬಿಡುವ ಮನಸಿಲ್ಲ ..ಹೋಗಿಬಿಡುವ ಹಾಗಿಲ್ಲ 
ನಿನ್ನ ಮೃದುತನದ ಹೂ ಮೆತ್ತೆ ಸುಖವಾಗಿದೆ ದೊರೆಯೇ 

ಬೆರಳ್ಗಳ ಆಕಾoಕ್ಷೆ ಮೆಲ್ಲನೊಪ್ಪಿಗೆಯ ಹೂ ಸುತ್ತಿನಲ್ಲಿ ತೆರೆದು 
ನಿರ್ಮಲ ನಗುವೊಂದರಲ್ಲಿ ಕರಗಿ ಪಯಣಿಸಿತಲ್ಲ ಹೂ ಒತ್ತಿನಲ್ಲಿ 
ಮತ್ತೆ ನೀಲಿಯಲಿ ಕರಗಿ ಮೌನದ ಚಿಪ್ಪ ಸೇರಿ ಹಿತವುಕ್ಕಿದೆ ದೊರೆಯೇ ...
ಬೆಳಗಾದರೆ ಬ್ರಹ್ಮರಂದ್ರವೇರಿ 
ನೆತ್ತಿ ನಡುವೆ ಕೂರುತ್ತಿಯಲ್ಲ ... 
ನನ್ನ ಸೂಕ್ಷ್ಮರಂದ್ರಗಳಿಗೂ 
ನಿನ್ನ ಅಗಾಧತೆ ಮುಳುಗೇಳುವಷ್ಟು 
ಉತ್ಕಟ ಧ್ಯಾನ ಸ್ಥಿತಿ 
ಸ್ಥಿತಪ್ರಜ್ಞನಾಗಿ ಈ ಪ್ರಜ್ಞ್ಯಾಹೀನತೆ 
ಇಳಿ ಕೆಳಗೆ ಹೃದಯ ಚಕ್ರಕ್ಕೆ
ಅಲ್ಲಿ ಏನಿತ್ತು ಎಂದು ಹೇಳಲಾರೆ 
ನಾಳೆ ಬರೆವ ಜೀವನಗಾಥೆಗೆ 
ಕಾವ್ಯದ ಸೊಗಸು ಕೊಡಬಲ್ಲ ಹೃದಯಗಳಿತ್ತು 
ಅದೊಂದು ಸುಂದರ ಮನೆ ... ಅವರಿಂದ
ನಿನಗೋ ಬಿಡದ ಕೆಲಸಗಳಿಂದ ಸಮಯವಿಲ್ಲ 
ನನಗೋ ಎಷ್ಟು ಸಮಯ ಉಳಿದಿದೆ ಎಂದೇ ಗೊತ್ತಿಲ್ಲ
ನೀನೆಂದರೆ ಏನೆಂದು ಕೊಂಡಿದ್ದಿ 
ದಿನವಿಡೀ ದುಡಿದು ,ಹೊಗೆಯ ಕೊನೆಗೆ 
ತಂಪಾದ ಗಾಳಿ ಸೇವಿಸುವ 
ಅದ್ಭುತ ವಿರಾಮ ಪ್ರಿಯನೆಂದೇ ?
ಹೇಳು ಮತ್ತೇಕೆ ನಿನ್ನೊಳಗೆ ಇಷ್ಟು ಯುದ್ದ ?
.ಹೊರಟು ಬಿಡುತ್ತೇನೆ ಸುಳಿವಿರದೇ ಹುಡುಕಾಟದಲ್ಲಿ 
ತೃಪ್ತ ನಗುವಿನೊಳಗೆ ಪೂರ್ಣಚಂದ್ರ ಮೂಡುವಲ್ಲಿ 
ನಾನೂ ನೀನೂ ಇರದಲ್ಲಿ ಇರಬಹುದಾದಲ್ಲಿ .... 
ಒಮ್ಮೆ ಕುಳಿತು ಕುಶಲ ಕೇಳಿ ಬಣ್ಣ ಬರೆದದ್ದೇ ಪೂರ್ಣ ಚಿತ್ರ
ನೀರಿನಲ್ಲೊಂದು ದಿನ 

ನೀಲ ಸ್ವರ್ಗದ ಹಾಸು ಮನವ ಉತ್ಸಾಹಿಸಿ 
ಆಟವಾಡಲು ಪಾದ ಕಾಯುತ್ತಿತ್ತು ....
ದುಂಡನೆ ಚೆಂದದ ಕಲ್ಲಿನ ರಾಶಿ ಕಚಗುಳಿಯಿಟ್ಟು 
ನೀರಿನೊಳಗೆ ಬೀಳಿಸಿ ಕೂದಲ ಒದ್ದೆ ಹನಿಗೆ ಕೆನ್ನೆ ನೆನೆದಿತ್ತು

ರೇಸಿಮೆಯ ಸೆರಗ ತುದಿ ನೀಲಿ ಬಣ್ಣ ಬಿಟ್ಟು ಮೈಗಿಳಿದಿತ್ತು
ಬಳೆಯ ಚೂರು ಕೈ ಚುಚ್ಚಿ ರಕ್ತವ ಹನಿಯಾಗಿ ನೀರಿಗಿಳಿಸಿತ್ತು
ಬೆನ್ನಿಗಂಟಿದ ಬಟ್ಟೆ ತಂಪಿನ ಕುತ್ತಿಗೆ ನರವ ಎಳೆಯುತ್ತಿತ್ತು
ನೀರಿನೊಳಗಿನ ಸಂಜೆ ನಿನ್ನ ಸಾನಿಧ್ಯದಲಿ ಅಪೂರ್ವವಾಗಿತ್ತು ...