ಶುಕ್ರವಾರ, ಮೇ 2, 2014

ಅರಿವು

ಅರಿವೇ ಕಳೆದುಹೋದ ನಿನಗೆ
ಬೇಕಿದ್ದೇ ತಿಳಿಯಲಿಲ್ಲ ....
ಅರಿವಿನ ಹಿಂದೇಕೆ ಓಡುತ್ತೀ
ನಿಲ್ಲು ನಿನ್ನ ಹಿಂದೆ ನಿಂತಿದೆ 
ಅವಸರದ ನಡಿಗೆ ಅ೦ತ್ಯದೆಡೆಗೆ 

ಅಂತಃಚಕ್ಷುವ ಬಿಡಿಸಿ ಕೂತು ನಿನ್ನ ನನ್ನ ವಯಸ್ಸಿಗೆ ತಾಳೆ ಹಾಕಿದೆ ನಾನು 
ನೀ ಈ ಜನ್ಮವಷ್ಟೇ ಲೆಕ್ಕ ಹಾಕಿದ್ದೀ . .. ಹಿಂದಿನದೆಲ್ಲೋ .. 
ಕುಳಿತಿರು ಆತ್ಮಾ .. ಎಣಿಸಿ ಬರುತ್ತೇನೆ ಜನ್ಮದ ಪಟ್ಟಿಗಳ .. 
ಇರುವೆಯಾಗಿ,ಎಮ್ಮೆ,ಜಿಂಕೆ,ಹಂದಿ ,ಹಸು,ಸ್ತ್ರೀ ..ದಾಟಿ ಪುರುಷನಾದಿ
ಅಂಗಲಾಚುವುದೇನೋ ..? ಇದೇ ಕಡೇ ಜನ್ಮ... ನಡೆ ....

ಮೇಧಾವಿ ಹೆಣ್ಣಿನೆದೆಗೆ ಒರಗಿಸಿಟ್ಟ ತಜ್ಞ ನಿರುಪಾಯ ಹೃದಯ ಬುತ್ತಿ
ಉಂಡದ್ದು ಉಪ್ಪಿರದ ಅನ್ನ ಹಲವು ಬಾರಿ ,,,ಹಾ ಋಣ ತಪ್ಪಿಸಲಿಕ್ಕೆ
ಬೆರಳಿಗೆ ಸುತ್ತಿಕೊ೦ಡ ದಾರ ಬಿಡಿಸಿ ಹರಿದಂಗಿಯ ಹೊಲೆಯಲಿಕ್ಕೆ
ಇರಲಿ ಬಿಡು ಮತ್ತೆ ಉಪಯೋಗವಿರದ ದೇಹದ೦ಗಿಯ ಮೋಹ ಬಿಟ್ಟು ನಡೆ
ವಯಸ್ಸೇನೂ ಓಡುವುದಿಲ್ಲ ... ನಿನಗೆ ದೇಹವಷ್ಟೇ ಲೆಕ್ಕ ತಾನೇ ...
ಹೋಳಿಯಾಡುವ 

ಕಾಮದ ಹುಟ್ಟಿಗೆ ತೆರೆದ ಕುಂಡಲಿನೀ ಯೋಗಿತ್ವದ ಚಲನೆ 
ಪಡೆಯಲೆಂದೇ ಲೋಕ ಬಯಸುವುದಿಲ್ಲ ... 
ಲೌಕಿಕದ ಜೀವಸತ್ವ ಪಡೆದೂ ಹರಿಯಲಿ ಸಹಜ ಸರಳವಾಗಿ
ಸುಡುವುದು ಕಾಮನೆಗಳ ಸುಡುಗಣ್ಣನ್ನ ಕಾಮವನ್ನಲ್ಲ .. 
ಶಿವಗಣ್ಣಿನ ಸುಡುಗಣ್ಣಿನ ಬೆಂಕಿಗೆ ಬಿದ್ದ ಅನಂಗನಿಗೂ ರತಿಯ ಪ್ರಭೆ
ಹರಿದು ಸಂಸಾರದ ಬಂಧ... ನಡೆಯಲಾಗುವುದೇ ಹಿಮಗಿರಿಗೆ
ಸಹಸ್ರಾರಕೆ ಹರಿವ ಅರಿವ ಬರೆದಿಟ್ಟುಕೋ ನಾಳೆಗಳಿಗೆ...
ಇಂದು ಕೈಗಳೆರಡು ಚಾಚಿ ಬಣ್ಣಗಳ ಬರೆದು ಹೋಳಿಯ
ಮೈದುಂಬಿ ನರ್ತಿಸಿ ಚಿತ್ರಗಳ ವಿಸ್ತಾರವಾಗಿಸುವ ಬಯಕೆ...
ಮಾತು 

ನಾ ಆಗೊಂದು ಈಗೊಂದು ಮಾತಾಡುವಾಗಲೂ 
ನಿನಗೆ ಕುತ್ತಿಗೆ ಹಿಸುಕಿದಂತಿರುವುದು 
ನೀನಿಡುವ ಅಂತರದಿ ಗೊತ್ತಾದರೂ 
ಮತ್ತದೇ ಮೂರ್ಖ ನಗು ನಿಲ್ಲಿಸು ಎಂದು 
ಮನಸ್ಸು ಬುದ್ಧಿ ಹೇಳುತಿದೆ ... 
ಇನ್ನಾದರೂ ಕೇಳಬೇಕು ಅಂತರಾತ್ಮದ ಮಾತು
ನೆನಪು 

ನೆನಪುಗಳಲ್ಲಿ ಬಂಧಿಯಾಗಿ 
ಕರ್ತವ್ಯವ ಮರೆಯದಿರೆಂದು 
ನೀ ಹೇಳಿದ ನೆನಪು 
ನಾ ಹಾಗೆಂದಾದರೂ ಮಾಡಿದ್ದರೆ 
ಉಸಿರಾಡಲು ಅನುಮತಿ ಇಲ್ಲವೇ 
ಇಲ್ಲ ಬಿಡು ,ನನ್ನ ನಿಯಮದ ಹಾಗೆ
ಸುಖ

ತಾವರೆಯ ಮೇಲಿನ ನೀರಿನಂತೆ
ಇರುವುದು ಬಾಂಡ್ಲಿಯಲ್ಲಿನ ಕುದಿನೀರಿಗೆ
ಬೆರಳಿಟ್ಟ ಹಾಗಿದೆ ,ಜೀವನ ನಶ್ವರ
ನಾನು ಲೌಕಿಕದ ಹಸುಗೂಸು ..
ಈ ಚಿಕ್ಕ ಪುಟ್ಟ ಸಂತೋಷಗಳೇ
ಸಾಕು ನನ್ನ ಜೀವನ ನಗುವಿಂದರಳಲಿಕ್ಕೆ
ಒಳಗಿರು ನನ್ನೊಳಗೆ 

ಅಗಲಿ ಇರುವುದೂ 
ಹೃದಯದ ಒಳಗೇ 
ಬಿಟ್ಟಿರುವುದೂ 
ಹೃದಯದ ಒಳಗೇ 
ಇದ್ದು ಬಿಡುವುದೂ 
ನನ್ನೊಳಗೇ .. 
ಸುಮ್ಮನೇ ಇದ್ದು 
ಬಿಡಬಾರದೇ ...
ನನ್ನ ಕಣ್ಣೆಷ್ಟು ಜೀವ ತುಂಬಿದರೂ 
ನಿನ್ನ ಚಿತ್ರ ನಸುನಗಲೇ ಇಲ್ಲ .. 
ಹೃದಯ ಮೊಗೆದರೆ ಕರಗಬಹುದಿತ್ತೇನೋ..
ಯುಗಾದಿ 

ಬರಲಿರುವ ಯುಗಾದಿಯ ಮುನ್ನ 
ಮುತ್ತು ಪೋಣಿಸಿದ ರಂಗೋಲಿ ಬಂದಾಯ್ತು ,
ಒಂಟಿಕೊಪ್ಪಲ್ ಪಂಚಾಂಗ ತಂದಾಯ್ತು 
ಉಡುಗೆ ತೊಡುಗೆ ಸಿಹಿ ರಾಶಿ ನಗೆ ,.. 
ಹಾ ತರಬೇಕಿನ್ನೂ ಮಾವು ಬೇವು ಬೆಲ್ಲ 
ಒಬ್ಬಟ್ಟಿಗೆ ಹೇಳಿಯಾಯಿತು ಹಿಂದಿನ ಸಂಜೆಗೆ 
ಹೊಸವರ್ಷಕ್ಕೆ "ಗುಡಿ ಪಾಡ್ವದ ''ಕೋಲು 
ಅಲಂಕಾರಗಳು ಇಳಿದಾಯಿತು ... 
ಶುರುವಾಗಬೇಕು ಶುಭಾಷಯದ ಮಾತು
ಬದಲಿಸಿಕೊಂಡು ಬೇವು-ಬೆಲ್ಲವ "ಶತಾಯು "
ಎಂದು ಕೊಡಲು ನಿಮಗೂ .. ಎಲ್ಲಿಲ್ಲದ ಸಂಬ್ರಮ

"ಯುಗಾದಿಯ ಶುಭಾಷಯಗಳು "
ಹೃದಯ ಕಂಪಿಸಿದಾಗ ಉರುಳಿ ಬಿದ್ದ ಕಣ್ಣೀರ ಹಾರ ತೊಟ್ಟು 
ಊರ ತೇರೆಳೆವ ರಾಜಕುಮಾರ ಕಳಶದ ಮಿನುಗಿಗೆ 
ನನ್ನ ಮೂಗುತಿಯನ್ನೇ ಕೊಡುತ್ತೇನೆ ಬಂದು ಬಿಡು
ತನನ 

ಹಿಮವ ಸರಿಸಿ ಬಿಸಿ ಹೆಜ್ಜೆಯೂರಲಿ 
ಶೃ೦ಗಾರ ಭಾವಗಳ ಕಲ್ಪವಲ್ಲಿ ... 
ಎಳೆ ಎಳೆ ಗೂಡಿಸಿ ಹೆಣೆದ ಪ್ರೇಮಾಲಾಪದ 
ಮೆಲು ಗುಂಜಾರವ ನಿನ್ನ ಕಿವಿಯ ತುಟಿಯ ಮೇಲೆ .. 
ಮೆಲ್ಲನಿರಿಸಿಹ ನೀರ ಗಿಂಡಿಯಲಿ ನೀ ಒಮ್ಮೆ
ಹಣೆಯದ್ದಿಕೊಂಡ ಬೆರಳ ಕಂಪನ
ನಾಭಿಗಿಳಿದ ಹನಿಗೆ ಯುಗಗಳು ಕಾದ ಪ್ರೀತಿ ಸಿಂಚನ
ಅಲಿಂಗನದ ಮಧುರ ಮತ್ತಿಗೆ ಕರಗಿ ಹೋದ
ತೆಳು ಗಾಂಧರ್ವ ಮುಸುಕ ಹೊದಿಕೆ ,
ಎಲ್ಲೋ ಕನಸಿನ೦ತೆ ಸುಸ್ವರದ ಹೊಂದಿಕೆ,
ಪವಡಿಸಿದ ತೊಡೆಯ೦ಚಿಗೆ ಸೆರಗ ಹೂಗುಚ್ಹ
ಸರಿದು ಹಣೆಗೆ ಮುತ್ತನಿಡುತಾ ಜೊಂಪೆಗೂದಲ ಸರಸ
ಒದ್ದೆ ಬೆನ್ನಿಗೆ ಬರೆದು ಕೊ೦ಡ ಬಳ್ಳಿ ನರಗಳ ಚಕ್ರ
ನಿನ್ನೊಳಗೆ ಹೆಣೆದುಕೊಂಡ ನಡುಗೆರೆಯ ಲಾಸ್ಯ
ಹಕ್ಕು 

ಮುಸುಕಿಗಷ್ಟೇ ಗೊತ್ತು 
ಅತ್ತದ್ದು ನಕ್ಕದ್ದು 
ನಿನಗೇನು ಹೇಳು 
ಪ್ರಶ್ನೆಗಳಿಗೆ ಉತ್ತರ 
ಕೊಡುವ ನಿದ್ರೆಯಲ್ಲೂ 
ಬರುವ ಹಕ್ಕಿಲ್ಲ
ಹೊಳೆವ ಕಂಗಳಲ್ಲಿ ಉತ್ತರದ 
ಹೊರತು ಮತ್ತೇನೂ ಉಳಿಯದ 
ಭರವಸೆಯಿತ್ತು ನಿನ್ನ ಕಂಡಾಗ ...
ಅಳಲು 

ಕಳೆದು ಹೋಗದಿರೆನ್ನ ಹೃದಯದ ಕಣ್ಣೇ ನಾ ಬಂದಿರುವುದೇ 
ನನ್ನ ನಾ ನೋಡಿಕೊಳ್ಳಲು ಅಲ್ಲವೇ ?
ಹಿಂದಿರುಗಿ ನೋಡಿದರೆ ಹೃದಯ ಮರುಗುವುದು 
ಇದೇನಾಯಿತು ನೋಡು ನಾ ಹೀಗಿರ ಬೇಕಿರಲಿಲ್ಲ 
ಎಂದೋ , ಎಲ್ಲೋ ಉಳಿದ ಎಳೆಗೆ ಜೋತು ಬಿದ್ದ ಸೊಪ್ಪಾಗಿ 
ಬಾಡಿ ಹೋಗಿದ್ದೇನೆ ನೀರಡಿಕೆ ತಣಿಸಿದರೂ ಅರಳದ ಬೇರಿರದ 
ಹಸಿರಷ್ಟೇ ಹರವಿದ್ದೇನೆ ಸುಮ್ಮನೇ ..ವ್ಯರ್ಥ
ನಿಂತು ಹೋಗಿದ್ದೇನೆ ಸಾವಿರ ಯೋಜನಾ೦ತರದಲ್ಲಿ 
ನೀ ನಿಲ್ಲಿಸಿ ಹೋದಕ್ಕಿ೦ತಾ ದೂರ ......
ಕೃಷ್ಣನೊಲವು 

ಕೃಷ್ಣಾ ನಿನ್ನ ನೆನೆದಾಗ ಕೊಳಲ ನಾದ ಹೃದಯ ತುಂಬಿ 
ಕಳೆದು ಹೋಗುವೆನು ದ್ವಾರಕೆಯ ದಾರಿಯಲಿ 
ನಿನ್ನೂರಿನ ಪರಿವಿರದೇ ಪಂಡರಾಪುರದ ಮೆರವಣಿಗೆಯ ನೆನಪಿನಲ್ಲಿ 
ಇಸ್ಕಾನಿನ ಸುಂದರ ಬಾಲಕೃಷ್ಣನ ಚಿತ್ರಗಳಲ್ಲಿ .... 
ನೆನಪಿನ ಚಿತ್ರಗಳಲ್ಲಿ ಬೆಣ್ಣೆ ತಿನ್ನುತ್ತಲೂ ತುಂಟ ನೋಟವೆಸೆಯುತ್ತಿ 
ಗೋಪಿಕೆಯರ ಸೀರೆಯ ಒಂದೊಂದೇ ಹಿಂತಿರಿಗಿಸುತ್ತೀ .. 
ಓಡಿ ಮರಗಳೆಡನು ತಳ್ಳಿ ಬೀಳಿಸುತ್ತೀ ... 
ಪಾರಿಜಾತದ ಸುಗಂಧವ ಸುತ್ತಲಿಗೆ ಸ್ವರ್ಗದಿಂದಿಳಿಸುತ್ತಿ 
ಭಾಮೆ ರುಕ್ಮಿಣಿಯರ ನಡುವೆ ರಾಧೆಯೊಡನೆ ಸರಸವಾಡುತ್ತಿ
ಆದರೂ ಕೃಷ್ಣ .. ಕೃಷ್ಣಾ ...ನೀನಿರದ ತಾಣವಿದೆಯೇ
ನನ್ನೀ ಪಯಣಕೆ ಅರ್ಥವಿದೆಯೇ ಹೇಳು ಒಮ್ಮೆ,..... ನಾ ನಿನ್ನೊಲವು
ನವಿಲು ಗರಿಯ ಸಮ್ಮೋಹನದಲಿ ಕೆನ್ನೆಗಾನಿಸಿ ಕೊಂಡು ನಿನ್ನ
ಮುತ್ತುಗಳ ಸವಿಯಲಿ ಜಗ ಮರೆತ ,ಪರಿವಿರದ ಕ್ಷಣಗಳ ನಿನಗರ್ಪಿಸುತಿಹೆ
ಕೊರಳ ಬಳಸಿ ತೂಗು ಬೀಳುವಾಸೆಯಿದೆ ಕರೆದುಕೋ ನನ್ನ ....
ದೇವರ ವರ 

ಕಲ್ಪನೆಗಳಲ್ಲಿ ಸೊಗಸುಂಟು ಗೆಳೆಯಾ 
ಅದೇಕೆ ಹೂದೋಟದ ಕಳೆಗಳ ಕೀಳುತ್ತಾ 
ಸುಂದರ ಹೂಗಳನ್ನ ಮರೆತೇ ಬಿಡುತ್ತೀ ... 
ನಿನ್ನ ಬದುಕೆಲ್ಲಾ ಗೊಬ್ಬರದ ಗೂಡಾಗುವುದು ಬೇಡ 
ಮೆಲ್ಲನೆ ಪವಡಿಸಿ ಹೂ ಹಂದರದ ಸುಂದರತೆಯ 
ಸ್ವೀಕರಿಸು .. ಬದುಕು ವರ ಕೊಟ್ಟಿರುವುದೇ ಹೀಗೆ
ರೂಪ 

ಜೀವದೆಳೆಯುವ ಅನೇಕ ರೂಪಗಳಿಗೆ ಹೇಳಿದ್ದೇನೆ ಸದಾ .. 
ಹುಟ್ಟುವುದಂತೂ ನಿಜ ...ಸಿ೦ಹರೂಪಿಯಾಗಿಯೇ ಬನ್ನಿ ... 
ನೆರಳಂತೆ ಛಾಯೆಗಳ ಹರಡಿಸದೇ ಸ್ಪಷ್ಟ ಪ್ರತ್ತ್ಯಕ್ಷ ವರ್ಣರೂಪ 
ಗುಡುಗು ಮಿಂಚಿನ ಸಹಿತ ಹೊಳೆವ ಬೆಳಕಾಗಿಯೇ ಬನ್ನಿ ....
ಇರಬೇಕಾಗಿಲ್ಲ ನೀನು ಇಲ್ಲಿ 
ಜಗತ್ತಿಗೊಬ್ಬನೇ ಸೂರ್ಯ 
ಕಳೆದು ಹೋಗಬೇಕಾಗಿಲ್ಲ 
ನನ್ನ ಮನದ ಕಡಲಡಿಯಲ್ಲಿ
ನಿನ್ನ ರೆಪ್ಪೆಯಡಿಯ 
ಮೃದು ಕಣ್ಸನ್ನೆಯಾಗುವಾಸೆ 
ನನಗೆ ..... ಸಮ್ಮತವೇ ?
ಅವನ ಹಿಂದೆ ಹಂಗಿಸಲು ಬಿದ್ದು ಅಷ್ಟೇಕೆ ಕುರೂಪಿಯಾಗುತ್ತೀ ಹುಡುಗೀ .... 
ನಗಲೂ ಆಗದೇ ಅಸಹ್ಯಸಿ ದೂರ ನಿಂತವರು ನಿನ್ನ ನಿಜರೂಪ ಕಾಣುತ್ತಿದ್ದಾರೆ ....
ಹಪ್

ನನ್ನ ಮಿಂಚುನಗೆ ನಿನಗೇಕೋ 
ಇಷ್ಟವಾಗುತ್ತಿಲ್ಲ ಅನ್ನಿಸಿದಾಗ ... 
ಮೌನವಾಗಲಿಕ್ಕೂ ಬೇಸರ 
ಹೃದಯವ ಬಡಿಯದೇ ನಿಲ್ಲೆನಬಹುದೇ ?
ಎಳೆಗೂದಲಿಗೆ ಮನವಿ 

ನಿನ್ನೆದೆಗೊರಗಿ ಹೊರಡುವ ಮುನ್ನ 
ತಲೆಗೂದಲು ಸಿಕ್ಕಿ ಕೊಳ್ಳಬಾರದಿತ್ತೇ 
ನಿನ್ನ೦ಗಿಯ ಗುಂಡಿಯಲ್ಲಿ ..... 
ಮತ್ತಷ್ಟು ಹೊತ್ತು ಮತ್ತಿನ ಬಿಸಿಗೆ 
ಒತ್ತಿ ನಿಂತಿರುತ್ತಿದ್ದೆ ಮಲ್ಲಿಗೆಯ ಎಸಳ 
ಮತ್ತಷ್ಟು ಹರವಿ ಒಲವ ಸುರಿಯುತ್ತಾ...
ಬಂಧ 

ಅಮ್ಮನೆನ್ನುತ್ತೀಯಾ.... ಮಗುವೆನ್ನುತ್ತೀಯಾ
ಒಮ್ಮೆ ಕುತ್ತಿಗೆ ಬಳಸಿ ತೂಗು ಬಿದ್ದರೆ .. 
ಮತ್ತೊಮ್ಮೆ ತೊಡೆ ಮೇಲೆ ತಟ್ಟಿ ಹಾಡುತ್ತಿಯ
ತ೦ಬೂರಿಯ ಹಿಂದೆ ನರ್ತಿಸುತ್ತಾ ನಡೆದ 
ಹುಚ್ಚು ಮಕ್ಕಳು ಇಡೀ ಊರ ಬೀದಿ ಅಲೆದ ಹಾಗೆ 
ಜೋಳಿಗೆಯ ಮಾಯದ ಮಾತಿಗಷ್ಟೇ ಅಲ್ಲ 
ಭುಜಬಲದ ಒಳ್ಳೇ ಕಾರ್ಯಗಳ ಶ್ರಮವನ್ನೂ 
ತೂಗಿ ಬಿಡುತ್ತೇನೆ ..
ಸೆರಗ ಜೋಲಿಯಲಿ ಮಲಗಿ
ಕೆನ್ನೆಗಂಟಿದ ಹನಿ ಬಿಂದುವ ಎದೆಗೊರಸಿ ನಕ್ಕ
ನಿರ್ಮಲ ನಗುವಿಗೆ ಅಭಾರಿಯೇ ಅಮ್ಮ ಇಲ್ಲ ಬಿಡು
ಮತ್ತಷ್ಟು ಹೊರೆ ಬೆನ್ನಿಗೇರಿಸಿ ಹೊರೋ ಮಗನೇ
ಇನ್ನಷ್ಟು ಗಟ್ಟಿಯಾಗು ಎಂದಾಳು ಹೆಮ್ಮೆಗೆ ಭುಜವೊತ್ತಿ
ಹರಿದು ನೆಂಟತನಗಳ ಮಮಕಾರಗಳ ಲೋಕಮಾತೆತನ
ನಡೆದಾಯಿತು ನಾನು ಹೊರಬೀದಿಗೆ ... ದೇಹದಾಚೆಗೆ
ಕೈ ಕೈ ಕೊಟ್ಟ ಕರುಣೆ ಪ್ರೀತಿಗಳ ಚುಂಬಿಸಿ ಸುರಿವ
ಸತ್ವವನ್ನೆಲ್ಲಾ ನಿನ್ನ ಉಳಿತಿಗೆ ಒಪ್ಪಿಸಿದ್ದೇನೆ
ಏನೋ ಲೋಕಕಲ್ಯಾಣದಲಿ ದೇಗುಲದ ಪ್ರಭೆ ಮೀರುತ್ತೀ ಎಂದು
ಹಸಿದ ದಿನ ಹೊರಗುಳಿಯಬೇಡ ಅಮ್ಮನಿದ್ದಾಳೆ ...
ಹೊಟ್ಟೆ ತುಂಬಿಸಿದ ನ೦ತರ ಮಗುವಾಗಿ ಆಡಲಿಕ್ಕೆ ಉಸಿರಿರುವವರೆಗೂ...
ಎಲ್ಲಿದ್ದೀರಿ ನೀವು 

ಬರಹದಾಚೆ ತೆವಳುತ್ತಿರುವ ತೇಪೆ ಬೇಕಿರುವ ಹೃದಯ ನೋಡಿದೆ 
ಒಂದಷ್ಟು ನೀರೂ ,ಎಲೆ ಮೇಲೆ ಒಂದಷ್ಟು ಅನ್ನ ಹಾಕಿ ಸಾಕೂ 
ಅಂತ ಗೋಗೆರೆಯಿತು ... ಇರು ಮಗಾ ಫೋಟೋ ತೆಗೆದು 
ಕವನ ಬರೀತೀನಿ ಇವತ್ತಿನ ಸ್ಟೇಟಸ್ ಮಸ್ತಾಗಿರೂತೆ ಅಂದೇ 
ಹೊಟ್ಟೆ ಬೆನ್ನಿಗ೦ಟ್ಕೊಂಡು ಎದೆ ಮೂಳೆ ಮದ್ಯೆ ಎದ್ದು ಎದ್ದು ಬೀಳ್ತಿದ್ದ 
ಪ್ಲಾಶ್ ಅಗ್ತಾ ಇರೋ ಫೋಟೋ ಜೊತೆಗೇ ಅವನ ಕಣ್ಣೀರೂ ಕೆನ್ನೆಗಿ೦ತಾ 
ಕೆಳಗಿಳಿದು ಅನ್ನದೊಳಗೆ ಬಿತ್ತು ..ಕೈ ಮುಗಿದೇ ಹೊರಟ ಬಿಡಿ ....

ಅನ್ನಕ್ಕಿಂತ ದೇವರಿಲ್ಲ /ಅತಿಥಿ ದೇವೋಭವ... ಅಕ್ಷರ ನೀವಿಹರು
ನೀವಿತ್ತ ಅನ್ನಕ್ಕೆ ಮೊಹರು ಬೇಕಿಲ್ಲ ಸ್ವಾಮಿ ,,,,,ಬೇಡಿದಾಗ
ತಟ್ಟೆಯಲ್ಲಿ ಒಂದು ರುಪಾಯಿ ಬಿಸಾಕಿದರೆ ದಯಾಮಯಿಯಲ್ಲ ನೀವು
ತಲೆ ತಗ್ಗಿಸಿ ನಡೆದು ಬಿಡಿ, ಬಡಿಸಿದ ತಟ್ಟೆಯಲ್ಲಿ ಒಂದಗುಳೂ ಅನ್ನ ಬಿಟ್ಟರೆ
ಹಸಿದು ಗಂಟಲು ಬಾಯಿಗ೦ಟಿ ಸಾಯುವವರ ಮು೦ದೆ ಕೂರಿಸಿ ಬಿಡುತ್ತೇನೆ
ಬಿರೋ ಬಿಸಿಲೋ ಮನೆಯೋ ಮಸಣವೋ ಅನ್ನದ್ದೇ ಪ್ರಶ್ನೆ ದೇಹ ದೇಗುಲಕ್ಕೆ
ಬೌದ್ದಿಕ ಸಾಂಗತ್ಯ ವಿಚಾರ ಧಾರೆ ಹೊಮ್ಮಿ ಕೊಟ್ಟದ್ದೇನು ಮೂರು ಅಣೆ
ಕೈ ಚಾಚಿದಲ್ಲಿ ತುತ್ತಿಟ್ಟು ಬಿಡಿ ಕರುಣೆ ಸಾಕು ತೆರೆದ ಕೈಯಲ್ಲಿ
ಕಿತ್ತಳೆ ಹಣ್ಣಿನಲ್ಲಿ ಮಾವಿನ ರುಚಿ ಬಯಸದಿರು ಗೆಳೆಯಾ 
ನಾ ಅವಳಲ್ಲ .. ಅವಳೇ ಬೇರೆ . ... 
ನಿನ್ನ ಕುರುಡು ಮನಸ್ಸಿಗೆ ವೈಚಿತ್ರ್ಯವೇ ಕೊರತೆ ...
ಲಸ್ಸಿ 

ಲಸ್ಸಿಯೊಳಗೆ ಬಿದ್ದ ಐಸ್ ಕ್ಯೂಬಿಗೆ 
ಕಸಿವಿಸಿ ನನ್ನನ್ಯಾರು ಈ ಬಿಸಿಗೆ 
ದೂಡಿದವರು ಎಂದು..... ?
ಸ್ಟ್ರಾ ದಲ್ಲಿ ಲಸ್ಸಿಯೊಳಗಿನ ಐಸು 
ಹೀರಿದಾಗ ... ಅದಕೂ 
ಸು೦ದರ ತಾಣ ಸೇರಿದ ಗಮ್ಮತ್ತು..
ಅಕ್ಕಿಯ ಹುಳುಗಳನ್ನ ಕಿತ್ತೆಸೆದು ಬಿಡು ಗೆಳತೀ 
ಜೀವವಿದೆಯೆಂದು ಕರುಣಿಸಿ ಮೈ ತುಂಬಾ 
ಬಿಟ್ಟುಕೊಂಡರೆ ಕಡಿದು ಹೈರಾಣಾಗಿಸಿ ಬಿಟ್ಟಾವು
ಕಾಲಿನಡಿ ಬಿದ್ದ ಹೆಣ್ಣಿನ ನೆರಳನ್ನೂ 
ತುಳಿಯಬೇಡ ನಿದ್ರೆಯಲ್ಲೂ
ನೊಂದುಕೊಳ್ಳುವಾದಂತೀತು
ತುಸುವೇ ನಗಬಹುದಿತ್ತು 
ಹೌದೋ ಅಲ್ಲವೋ ಎಂಬಂತೆ 
ಭಾವಚಿತ್ರವ ಇನ್ನೊ೦ದು ಕ್ಷಣ 
ನೀ ದೃಷ್ಟಿಸಿ ನೋಡಿದಾಗ
ತಟಸ್ಥ 

ನಿಂತು ಬಿಡುವುದೇ ನಿನ್ನ ಇಚ್ಚೆಯಾದರೆ 
ಹೃದಯದೊಳಗೆ ಜಾಗವಿತ್ತು 
ಮೆಟ್ಟಿಲಿನ ಮೇಲೇಕೆ ಮಲಗಿದ್ದೀ '
ಯುಗ ಯುಗಗಳಿoದ ... ನಾನೋ 
ಒಳಗೆ ಬಂದರಷ್ಟೇ ಕೊಡಲು 
ಬೆನ್ನು ಮೂಳೆಯನ್ನ ಗೋಡೆಗೊರಗಿಸಿ 
ಅಷ್ಟೇ ಯುಗಾಂತರಗಳಾಗಿದೆ 
ಈಗ ಚಕ್ರಗಳಿಗೋ ಸುತ್ತುವುದೇ ಮರೆತು ಹೋಗಿದೆ 
ತೆವಳಿ ಸವೆದ ಅಂಗೈಗೆ ಒ೦ದಿಷ್ಟು ಜೀವ
ಉಳಿದಿದೆ... ಸಮ್ಮತವೆಂದರೆ ಪಳೆಯುಳಿಕೆಗೆ
ಮುತ್ತಿಟ್ಟುಕೋ ಸತ್ತಿಲ್ಲ ಸಂವೇದನೆಗಳು ಇನ್ನೂ
ಕೃಷ್ಣಾ ....

ರಾಧೆ ಗೋಪಿಕೆಯರ 
ಕರೆಗೆ ಓಡಿ ಓಡಿ
ಸುಸ್ತಾಗಬಹುದೆಂದೇ 
ಈ ಊರಲ್ಲಿ ''ಸ್ಪಾ'' ಗಳಿವೆ 
ಕಾಲೊತ್ತಿಸಿ ಕೊಳ್ಳಲಿಕ್ಕೆ 
ಕಷ್ಟವೆಂದರೆ ಕೃಷ್ಣರ 
ಸಂಖ್ಯೆ ಮಿತಿಯಿರದಷ್ಟು...
ಕೆನೆಗಟ್ಟಿದ ಹಾಲಿನಲ್ಲಿ ಬೆರೆತ 
ವೇದಾ೦ತದ ಕಲ್ಲುಸಕ್ಕರೆ 
ಬಿಸಿಯಿರದೆಯೂ ಹಿತವಾಗಿದೆ 
ಸುಖದ ತಂಪು ಬದುಕಿಗೆ
ಒಂದೊಂದು ಕಡೆ ಒಬ್ಬೊಬ್ಬರು ಒರಗಿದ್ದರು 
ನಿನ್ನ ಹೃದಯದ ಒಳಗೇ ಒರಗಿಕೊಂಡಿದ್ದ ನನ್ನ 
ಒಳಗೇ ಜೀವಿಸುತ್ತಿದ್ದ ಜೀವಗಳು ನೋಡಿದರೂ 
ನೋಡದೇ ನಿನ್ನ ಪ್ರೀತಿಸುತಿಹುವಲ್ಲ ...
ಕಣ್ಣವೆಯಲ್ಲಿ ಜಿನುಗಿದ ಕಂಬನಿ ಕಂಡು 
ಹೃದಯ ದ್ರವಿಸಿ ಹೋಯಿತು ಗೆಳೆಯಾ 
ಪ್ರೀತಿ ತುಂಬಲಿಕ್ಕೆ ಹೃದಯದಲ್ಲಿ ಅಕ್ಷಯ 
ಪ್ರಳಯ ನಡೆಯುತಿಹುದೆಂದು ಬಲ್ಲೆ .. 
ಜೀವನವೇ ಹೀಗೆ .... ಮಮತೆ ತುಂಬಿದ 
ಜೀವಗಳ ನಡುವಿನ ಬದುಕು
ಮುದ್ರೆ 

ಹೋಗಿ ಬರಬಹುದಿತ್ತು ನಾನೂ ನೀನೂ
ತೂಗುವ ಗೊಂಚಲ ಮಾವಿನ ತೋಪಿಗೆ 
ಚಿಗುರ ಕಚ್ಚಿ ತಿಂಗಳೊ೦ದು ಕಾಲ ಕಾದ 
ಹಕ್ಕಿ ಮನಸಿಗೂ ತವಕ .. 
ಹಣ್ಣಾಗುವ ಒಗರು .. ಹಸಿರು ಕಾಯುವ 
ಒಣಹುಲ್ಲಿನಲಿ ಇದ್ದೇ ಹಣ್ಣಾಗುವುದೇ .. 
ರುಚಿಯ ಮುಸುಕಿನಲಿ ನೇವರಿಸಿ .. 
ಸವಿಯ ಮೆಲುಕಿನಲಿ ತುಟಿಯಲುಗಿಸಿ 
ಬರಿದೇ ಮಾಮರದ ನೆರಳಲೂ
ವಿಹರಿಸಬಹುದಿತ್ತು ... ನೀನೊಪ್ಪುಗೆಯ
ಮುದ್ರೆಯೊತ್ತಿದರೆ ....
ಒತ್ತು 

ಹಾಸಿಗೆಯಡಿಯ ಕೂದಲು ಒತ್ತಿ 
ನೋಯಿಸುತ್ತಿದೆ ನೋಡು ... 
ಕಡುಗೆಂಪು ಬಟ್ಟೆ ಹೊದ್ದ ಮೆತ್ತೆಯ 
ಬೇಸರವೇನೋ ಅರಿಯೆ 
ಸುಡು ಬೇಸಿಗೆಗೆ ಸುಮ್ಮನೇ ಮೈ ಚೆಲ್ಲಿ 
ನಿದ್ರಿಸದೇ ಹೊರಳಾಡಿದಕ್ಕೇ 
ಗಾಳಿಯಲಿ ಕೂದಲ ಸೆಳೆದು 
ಹೀಗೊತ್ತಬಹುದೇ?
ಪ್ರಿಯನ ಬೆನ್ನ ಸುಪ್ಪತ್ತಿಗೆಯ ಆಸರೆ 
ತಪ್ಪಿದ್ದರೆ ಇನ್ನೆಷ್ಟು ಕಾಡುತ್ತಿತ್ತೋ....
ಸವಿ 

ಮರದ ಚಿತ್ರವ ಬರೆಸಿ
ರಾತ್ರಿಯಿಡೀ ನಿದ್ರೆಯಲಿ 
ನಾ ನೆನೆಪಿಸದೇ ಸರಿದರೂ 
ಮುಂಜಾವು ಪಾದವಿಳಿಸಿದಾಗ 
ಬಟ್ಟೆಯ ತುದಿಯೆಳೆದ 
ಮಂಚದ ಹಿಡಿಕೆಗೆ .... 
ನಾನೆದ್ದು ಹೋಗುವುದೇ 
ಇಷ್ಟವಿರಲಿಲ್ಲ.... 
ಹಾಗೇಕೆ ಮುನ್ನವೇ ಹೇಳಲಿಲ್ಲ
ಸಹಜ(ಅ) 

ಜೀವಂತಿಕೆಯ ಜನ ಓಡಾಡುವ ಕಡೆ 
ಹೆಣ ಗೋರಿಗಳು ಸುಳಿಯುತಿವೆ 
ನಿತ್ಯದ ಮಾತಂತೆ .,ಸಾವಷ್ಟು 
ಸುoದರವೂ ಅಲ್ಲ ... 
ಅಗಲಿಕೆಯ ನೋವೂ ಹಿತವಲ್ಲ 
ನಿರ್ಜೀವವಾದ ದೇಹ ಹುಗಿಯುವ 
ಮಾತು ಸಾಕು ... 
ಬದುಕಿ ಬಾಳುವ ಚಿಲಿಪಿಲಿ ಹುಟ್ಟಲಿ
ನೆರಳು ತಾಗುವಂತೆಯೇ 
ನಡೆಯುತ್ತಿದ್ದೆ ... 
ಯಾವ ದಾರಿಗೆ ಹೊರಳಿ 
ಕೊಂಡೆಯೋ ನಿನ್ನ ಹಿಂದೆ 
ನೆರಳೇ ಬೀಳುತ್ತಿಲ್ಲ ...
ನಿನ್ನೆ ಬಿದ್ದ ಕನಸು 
ಮತ್ತೊಮ್ಮೆ ಬರಲಿ 
ಎಂದೇ ಕಣ್ಮುಚ್ಚಿ ಕುಳಿತೆ 
ಹೃದಯ ಕಿರುಗುಟ್ಟಿತು 
ಒಮ್ಮೆ ಬಾ ನನಸಿಗೆ ...
ನಾನು ನಿನ್ನ ವ್ಯಾಮೋಹಕ್ಕೆ 
ಬಿದ್ದೆ ಎಂದು ಸನ್ಯಾಸಕ್ಕೆ 
ಹೋಗಗೊಡಲಿಲ್ಲ ಮನಸು ... 
ಪರಿತಾಪ ಕಳೆದು .... 
ಒಲವಿನಲಿ ಈಜತೊಡಗಿದ್ದೀನೆ
ಅರಳೀ ಮರದಡಿ ಕ್ಷಣ ಕೂತರೂ 
ಹೊಸತನ ಉಕ್ಕುವುದೆ೦ದು 
ಬಿಳಲುಗಳಿಗೆ ಜೋತುಬಿದ್ದೇ 
ಬೆಳೆಯುತ್ತಿದ್ದೇನೆ....
ಆಸ್ಪತ್ರೆಯ ಜೀವ ಚಕ್ರ 

ನಟನೆಯ ಮೀರಿ ಬದುಕಬೇಕಾಗಿದೆ ಏಕೆಂದರೆ ಇದು 
ದಿನ ನೋವಿನ ಚಿತ್ರ .. ಈ ದೈನ್ಯತೆಗೆ ಒರೆ ಹಚ್ಚಿ ನೋಡಲೇ 
ಬೇಕಿಲ್ಲ .. ರಕ್ತ ಒಸರುವ ಗಾಯಗಳೇ ಸಾಕು ತನ್ನ ಕಥೆಯ 
ಕೇಳಿ ರಕ್ತ ಕಂಬನಿ ಸಿಡಿಸುವುದಕ್ಕೆ .... 

ಆಸರೆಗೆ ಕೈಗಳೇ ನಂಬಿ ನಿ೦ತವರು ಎಲ್ಲೋ ಒಬ್ಬರು 
ಮತ್ತೆಲ್ಲ ಕೋಲುಗಳ ಗಾಲಿಚಕ್ರಗಳ ಹಿಡಿತಕ್ಕೆ ಸಿಕ್ಕವರು 
ಬಾಡಿ ಹೋದ ಕಂಗಳ ತುಂಬಾ ನೀರು ತರಲೂ ಶಕ್ತಿಯಿರದೇ 
ಬಾಯಾರಿಕೆಗೂ ಸಂಕೋಚಿಸಿ ಒಣ ನಾಲಿಗೆಯಲಿ ನಡುಗಿದವರು ...

ಬವಣೆಗೆ ಬಿದ್ದವರಾರಿಗೂ ತಿಳಿದಿರಲಿಲ್ಲ ಹಣೆ ಬರಹ ಒಂದೋ ಎರಡೋ
ಬೆರಳ ಸಮಾಧಿಗೆ ಕಳಿಸಿ ಕುಂಟುತ್ತಾ ಉಳಿದ ಪಾದಕ್ಕೆ ಬಟ್ಟೆಸುತ್ತುತ್ತಾ
ನಾಳಿನ ಚಿಂತೆಗೆಂದೇ ಉಳಿಸಿದ ಮೂರು ಕಾಸೂ ಮುಗಿದು .. ನಿಟ್ಟುಸಿರಿಡುವಾಗ
ಹೃದಯ ಮಾತ್ರವಲ್ಲ ಕಿಡ್ನಿಯಲ್ಲೂ ನಡುಕ ಸಾಕುವ ಜನರ ಕೆಂಗಣ್ಣಿನದ್ದು....

ಜೀವಮಾನವಿಡೀ ದುಡಿದದ್ದ ಕಾಯಿಲೆಯೇ ತಿಂದುಕೊಳ್ಳುವಾಗ ನಾಳಿನ
ಅನ್ನಕ್ಕೆ ಅಂಗೈ ಒಣಗಿ ಚಾಚಬೇಕಾದ... ಬದುಕೇ ಎದೆಯಲ್ಲಿ ದುಸ್ತರವೆನೆಸಿ
ಸಾವಿಗೂ ತುಂಬುಬಾಳಿಗೂ ನಡುವೆ ಸೃಷ್ಟಿಯಾದೀ ದುರ್ಗಮ ಹಾದಿಯ
ಸವೆಸಲಾರದೇ ನಡೆಯುವಾಗ ನಗುಬಾರದೆಯೂ ... ಅಳಲಾರದೆಯೂ ... ಹೀಗೆ ..
ಸುತ್ತಲಿಗೆ ಮೋಸಗೊಳಿಸಲಾರೆ 
ಇದ್ದಲ್ಲಿಂದ ಸರಿದು ಕನಸುಗಳ ಒಳಗೆ 
ಕಳೆದು ಹೋಗುತ್ತಾ ..... 

ನಸುನಗುವ ನೋಡುವ ಒಂದೂ 
ನಿಮಿಷವ ಕಳೆದು ಕೊಳ್ಳಲಾರೆ 
ಎಚ್ಚರದಿ ನಿದ್ರಿಸುತ್ತಾ ....
ಹೊಸ ಬೆಳಗು 

ಮಲಗಿ ಎದ್ದ ಮೇಲೆ ಬಂದ ಬೆಳಗು 
ಬೆರಗೋ ಬೆರಗು ... ಸೂಸುತಿದೆ 
ನಾನು ಹೊಸ ದಿನ ಏನಾದರೂ ಕೊಡು 
ಎಂದು ಕಂದನ ಪರಿ ಕಾಡುತಿದೆ .... 

ಅಂಗೈಯಲ್ಲಿ ಬೆಲ್ಲ ನೆಲಗಡಲೆಯಿತ್ತ 
ಪೂರ್ವಿಕರ ನೆನಪುಕ್ಕಿ, ಹಾಲು ಚಾಕ್ಲೇಟು 
ಹಂಚಿ ಗುಳಿಗಲ್ಲವ ಮುದ್ದಿಸುತಿರೆ 
ಮನೆಯ ತೋರಣ ನನ್ನನೂ ಬದಲಿಸೆ೦ದಿದೆ

ನಿನ್ನೆ ರಂಗೋಲಿ ಕಲೆಸಿ .. ನಿನ್ನೆಯ ಕಾಡಿಗೆ
ಕೆನ್ನೆಗಿಳಿದು ,ವಕ್ರವಾದ ಹಣೆ ಬೊಟ್ಟಿನ ಕೆಳಗೆ
ನಿದ್ರೆ ಕಳೆದ ಮಗುವಿನಂತೆ ತಿಳಿ ನಗುವಿದೆ
ಹೊಸ ದಿನಕೂ ಹೊಸದು ಬೇಕಿದೆ.....