ಗುರುವಾರ, ಜುಲೈ 11, 2013

ಜೀವನ ,ನಾವು ತಪ್ಪಿದ್ದೆಲ್ಲಿ ?

ಸದಾ ಕೆಲಸದಲ್ಲಿ ತೊಡಗಿದ ಆ ಒರಟು ಕೈ ಗುಡ್ಡೆಯ ತರಗಲೆ ಪ್ರತಿ ಮಧ್ಯಾನ್ಹ ಗುಡಿಸಿದ್ದನ್ನ ಕಂಡಿದ್ದೇನೆ ,
ಸೆರಗು ಹಿಡಿದು ಆರರ ಬಾಲೆಯಾದರೂ ನಾನೂ ಎಂದು ರಾಶಿಯಲಿ ಧೂಳಾಟವಾಡಿದ್ದೇನೆ ,
ಗೇರುಮರ ಹತ್ತಿ ಅಂಗಿ ಕಲೆಯಾದಾಗ ,ಮಾವಿನ ಹಣ್ಣು ,ಹಲಸು ಪೇರಲೆಗಳ,ಅತ್ತಿ ,ಏಲಕ್ಕಿಗಳ ಸವಿದಿದ್ದೇನೆ 
ತರಗಲೆ ಒಲೆ ಸೇರಿ ಸಂಜೆ ಸ್ನಾನದ ಸರದಿಯಲಿ ಹತ್ತನೆಯವಳಾಗಿ ದೊಡ್ಡಮ್ಮನ ಒಪ್ಪಕ್ಕೆ ಬಿದ್ದಿದ್ದೇನೆ

ಆ ಹಿರಿ ಜೀವ ದಿನ ಬೆಳಗೂ ಮೂರು ಗಂಟೆಗೇ ದೋಸೆಯ ರಾಶಿ ಮಾಡಲು ಏಳುತ್ತಿತ್ತು ,ರುಬ್ಬಿ ನಡುರಾತ್ರಿ ಮಲಗುತ್ತಿತ್ತು
ನ್ಯಾಯ ಮಾಡುವ ಕಿರಿಯರ ಕಿವಿ ಹಿಡಿದು ,ಕೆಲಸ ಹಂಚಿ ,ಕುಚ್ಚಿಗೆ ಗಂಜಿಯ ಬೆಲೆ ಕೊಡಿಸುತ್ತಿತ್ತಾ ಜೀವ ,
ಪಕ್ಕನೆ ಬೇಡವಾಯಿತು ಹೊಸ ಸಂತತಿಗೆ ,ಯಾರ ಜೀವನಕ್ಕಾಗಿ ಜೀವ ತೇದರೂ ಬಂದದ್ದು ಧೂಳ ಕಣ ಮುಖದ ಮೇಲೆ
ಸಗಣಿಯ ಅಂಗಳದಲ್ಲಿ ರಾಶಿ ಬೀಳುತ್ತಿದ್ದ ಹಲಸಿನ ಹಪ್ಪಳ ಆ ಕಾಲಕ್ಕೇ ಕೊನೆಯಾಯಿತು ,ಕುಚ್ಚಿಗೆ ವೈಭವವೂ

ಊರು ಊರಿಂದ ಧಾವಿಸುವ ನೆಂಟರು ಕೊಂಡೊಯುತ್ತಿದ್ದ ಉಪ್ಪಿನಕಾಯಿ ಜಾಡಿ ,ಹಪ್ಪಳ ರಾಶಿ ಇಂದು ಇಲ್ಲ
ಸವೆದ ಹಿರಿ ಜೀವ ಮಾತ್ರ ಎಲ್ಲೋ ಮಲಗಿ ಸವೆದ ಕೈಗಳ ಕರ್ಮ ನೆನೆದು ದು:ಖಿಸುತಿಹುದಲ್ಲ . ,
ಬೇಡ ಹಣ ,ಬೇಡ ಕರುಣೆ ,ಇರಲಿ ಪ್ರೀತಿ ನಿರಂತರ ,ಕಾಲ ಕಾಲಕೂ ಜೀವನ ಚಕ್ರವಿದು ವಿಚಿತ್ರ ಮನದಂತರ
ಸ್ನಾನ -ಊಟದೊಂದಿಗೆ ಬದುಕ ಕಲಿಸಿದ ಈ ಜೀವಕ್ಕೆ ಕೋಟಿ ನಮನ ,ಆ ಜೀವದ ಆರೋಗ್ಯಕ್ಕಾಗಿ ಹೃದಯದ ತಪನ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ