ಬುಧವಾರ, ಜುಲೈ 3, 2013

ಸಂತಸದ ಹನಿ

೧ 
ಇರುವು 
ಈ ಸುಡುಬೇಸಿಗೆಯ ಸುಡುಬೇಗೆ ನನ್ನೆದೆಯಲ್ಲಿ
ಎದೆಯೆಬ್ಬಿಸುವ ಬಿಸಿನೋವೊಳಗೂ ಅರಳುವ
ನಗೆ ಹೂಗಳ ಅಂದದ ಕಂಪನ್ನು
ತುಟಿಯಲ್ಲಿರಿಸಿಕೋ ಇನಿಯ ಬಾ ಸನಿಹ .

ಚೈತ್ರದ ಹೊಂಗನಸುಗಳಿಗೆ ಮುಂಗುರುಳೊತ್ತಿ
ಬೆರಳ ನಡುವಿನ ಬೆಚ್ಚನೆ ನವಿರು ಭಾವಗಳಿಗೆ
ಉಳಿಸಲಾರದ ಸವಿಬಿಸಿಯ ಕಾವಿಡುವಾಗ
ನೀನಿರು ಸನಿಹ ಬಾ ಇನಿಯ

ನೀಲಾಗಸದ ನಡುವೆ ಹಾರುವ ಹುಸಿ ಮೋಡಗಳ
ಅಲ್ಲಲ್ಲಿ ಚುಮುಕಿಸಿದ ಹನಿಯ ಅಪರೂಪದಾಟಕ್ಕೂ
ಮಳೆಯಾಸೆ ಎದೆಯೊತ್ತುತ್ತಾ ಇರಲೀ ತುಂತುರೆನ್ನುವಾಗ
ತುಟಿಯೊಳಗೆ ಹರಿವ ಹನಿಯಾಗಿರು ಇನಿಯ

ಬಿಸಿಯ ಗಾಳಿಗೆ ಸುತ್ತುವ ಧೂಳಿನ ಕೆಂಪು ಕಸಿವಿಸಿಯಲ್ಲೂ
ಹೃದಯದ ಶುದ್ದ ತಂಗಾಳಿಯ ಉಸಿರಾಟದೊಳಕ್ಕೂ
ಇನ್ನಷ್ಟು ಹತ್ತಿರಾಗುವ ಬಿಸಿ ಬಯಕೆಯಲ್ಲಿ
ನನ್ನೊಳಗಿನ ಆತ್ಮ ಮಿಲನೋತ್ಸವದಲೊಂದಾಗು ಇನಿಯ
೨ 
ಬಾಳ ಗೆಳೆಯ

ನಿನ್ನ ನೋಟದ ಜೇನಹನಿಯೊಳಗೆ ನನ್ನ ಬಾಳಿನ ಬಿಂದು
ಕರಗಿ ನಿನ್ನದೇ ಶಬ್ದ ಪ್ರತಿದ್ವನಿಸಿ ನಾನು ನೀನಾಗುವ ಆ ಸವಿ ಕ್ಷಣ
ಏಕದನಿ ನಾದವಾಗಿ,ನಿನಾದವಾಗಿ ಪ್ರೀತಿಯ ಉತ್ಸವವಾಗಿದೆಯಲ್ಲಾ
ಜೀವ ಹೂವಾದ ಇಬ್ಬನಿ ಮುತ್ತಿಟ್ಟ ರೋಮಾಂಚನದ ಈ ಗಳಿಗೆ

ಬಾನಿನಗಲೆತ್ತರಕ್ಕೂ ಕೆಂಪಿನೋಕುಳಿ ಗಲ್ಲದಲಿ ಹರಡುವಿಕ್ಕೆಲದ ಗುರುತು
ಒತ್ತಿ ಕೋಮಲತೆಯ ಮೃದು ಗಾನ ಹೊರದಡಿಸುವಾಗ ಪ್ರಭೆ ಅದ್ಬುತ ಕಾಂತಿ
ಪ್ರತಿನಿಮಿಷದ ಶಬ್ದವೂ ದೃಷ್ಟಿಯೊಳಗೆ ಕರಗಿ ಬಿಂಬದ ಒಳ ತಪಸ್ಸಾದಾಗ
ಬದುಕು ಮತ್ತೆ ನಿನ್ನೆಯ ಹುಡುಕಿ ಎತ್ತೆತ್ತರಕೆ ಬೆಳೆದು ತೊಳ್ತೆರೆಯಬಾರದೇ ನನಗೆ
೩ 
ಎದೆಯುತ್ತರ 

ನೀನಾಗು ನನ್ನೆತ್ತರಕ್ಕೂ ಹರಡುವoತಹಾ ಹಸಿರು 
ಪ್ರತೀ ಚಿಗುರಿನಲ್ಲೂ ,ಹೊಸ ತಲ್ಲಣ ಎದೆಗೆ 
ಪ್ರೀತಿಯ ಉಬ್ಬರದಲ್ಲೂ ಅಲೆಅಲೆಗೂ ಹರಡುವ 
ನಿಂತ ನೀರು ಹರಿವ ಪುಳಕವೆದೆಗೆ . 

ಎದೆಉತ್ತರವೇ ತುಮುಲಗಳ ಸೃಷ್ಟಿಸುತ್ತಾ 
ಪಸರಿಸಿದೆ ಮುಗುಳ್ನಗುವ ಮೊಗ್ಗುಗಳನು
ಕಂಬನಿಗೆ ಕೆನ್ನೆಯಿರಿಸಿ ಸಂತಸದ ಹನಿಯೇ?ಎಂದು 
ಹಸಿರು ಕೇಳುತಿದೆ ಉಸಿರೊಳಗೆ ಸೇರಿ . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ