ಬುಧವಾರ, ಜುಲೈ 24, 2013

ಕುಂಕುಮಕ್ಕೆ ಬಂದ ಹೂಗಳು

ಆರತಿಗೆ ಅಕ್ಷತೆಯ ಬೆರಳಲ್ಲಿ ಹಿಡಿದ ಹೂವಂತ ಹೆಂಗಳೆಯರು
ಕೋಮಲ ಕರಗಳಲಿ ಸದ್ಗುಣಗಳ ಪ್ರಾರ್ಥನೆಯಿರಿಸಿ
ಎಲ್ಲರ ಅರೋಗ್ಯ ,ಸಂಪತ್ತು,ಸೌಭಾಗ್ಯಕ್ಕಾಗಿ ಬೇಡಿದರು
ಹೂಮಾಲೆಯ ಮೆದುವಿಗೆ ,ಆರತಿಯ ಹಾಡಿಗೆ ಮನ ಕಣ್ತುಂಬಿತು

ಸಪ್ತವರ್ಣದ ಸೆರಗಲಿ ಮಡಿಲಕ್ಕಿಯ ಹಿಡಿ ತುಂಬಿ ಚಿಟಿಕೆಯುಳಿಸಿ ,
ಕೆನ್ನೆಗೆ ಅರಸಿನ ,ಹಣೆಗೆ ಕುಂಕುಮ ,ಬೆರಳ್ತುದಿಗೆ ಶ್ರೀಗಂಧ ಮುಟ್ಟಿಸಿ
ಬಾಗಿ ನಮಿಸಿಎದ್ದವರು ನಗುವುದೆಷ್ಟು ಸೊಗಸು ,ಸುರಿವುದು ಸಿರಿ ಸಂಪತ್ತು
ಹೆಣ್ಣುಮಕ್ಕಳ ಪಾದದರಸಿನದ ಚೆಲುವಿಗೆ ಸೋತಿತು ಎಲ್ಲರ ಮನಸು

ಸೆರಗ ಹಿಂದಿನ ಚಿಣ್ಣರ ಸಿಹಿತಿಂಡಿಯ ಬದಿಯ ಚಕ್ಕುಲಿ ಆಹಾ ಸವಿ
ಗಾಜಿನ ಬಳೆಯ ಝಣತ್ಕಾರದಲಿ ಎಲೆ ಅಡಿಕೆಯೊಳಗಿನ ಖರ್ಜೂರ ,
ಪೂರ್ಣಫಲ ತುಂಬು ತೇಜಸ್ಸು ,ಸಕಲಲೈಶ್ವೈರ್ಯ ಪೂಜಾ ಶ್ರೇಯಸ್ಸು
ಅಕ್ಷತೆಯಿರಿಸಿ ಹೂದಳಗಳನೇರಿಸಿ ,ಮುಡಿಗೆ ಮಲ್ಲಿಗೆ ಪಡೆದು ಫಲಾಹಾರ

ಪ್ರಸಾದ ಸೇವೆಯಲಿ,ಪಾದ ನಮಸ್ಕಾರದಲಿ ,ಪುಟ್ಟವರ ಕಲರವದಲಿ
ಮನೆ ತುಂಬಾ ಪಾಯಸದ ಘಮ ,ಓಡಾಟಗಳ ಸಡಗರ
ಪೂಜೆಯ ಪುಷ್ಪ ಅಲಂಕಾರಗಳಲಿ ಮನಸು ತೃಪ್ತಿ ಸಾಗರ
ದಿನವಿಡೀ ಉರಿವ ಕಿರುದೀಪದಲಿ ,ಮನಸ ಮಂದಹಾಸ ದೈವ ಸಾಕ್ಷಾತ್ಕಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ