ಮಂಗಳವಾರ, ಸೆಪ್ಟೆಂಬರ್ 24, 2013

ಉಯ್ಯಾಲೆ

ಉಯ್ಯಾಲೆ 

ಆಲದ ಬಿಳಲುಗಳಲಿ ಜೀಕಿ ಬಾಲ್ಯದಲಿ ಆಡಿದ್ದುಂಟು 
ಹುಡುಗರಾಗಿದ್ದಾಗ ಅಲ್ಲಲ್ಲಿ ಜೀಕುವ ಆಟದ ಹುಚ್ಚಿತ್ತು 
ಯೌವನದ ಕನಸಲ್ಲಿ ಮನದನ್ನನೊಡನೆ ಹೂ ಜೋಕಾಲಿ 
ಬದುಕ ಜೋಕಾಲಿ ನಲಿಯುವಲ್ಲಿ ಅಲ್ಲೇ ನಿಲ್ಲಲಿಲ್ಲ

ಪಯಣಿಸುವಾಗ ಕಾಣುತ್ತಿದ್ದೆ ಕಾಂಕ್ರೀಟು ಕಟ್ಟಡಗಳಲ್ಲಿ
ಕಲಸಗಾರರು ನೇತಾಡಿಕೊಂಡು, ಜೀವ ಜೋತಾಡಿಸಿಕೊಂಡು
ಉಯ್ಯಲೆಯಾಡುವುದನ್ನ .. ಬೇಕಿತ್ತೇ ಇದು ಅವರಿಗೆ
ಸಂತೋಷ ಎಲ್ಲಿತ್ತು ಹಿಡಿ ಅನ್ನದ ಉಯ್ಯಾಲೆ ಬಾಳಿಗೆ ?

ದಾರಿ ಬದಿ ಬೋರ್ಡುಗಳ ಎತ್ತೆತ್ತರದಲಿ ಬರೆಯುತ್ತ
ತತ್ತರದ ಬಾಲ್ಯ.. ಜೀಕುವ ಹಗ್ಗದ ಪ್ರಾಣ ಭಯವ ತೊರೆದು
ಉಯ್ಯಾಲೆಯಾಡುವುದನ್ನ ಕಂಡು ಮರುಗಿದ್ದೇನೆ
ನಿಲಿಸಲಾರೆವೀ ವ್ಯವಸ್ತೆಯನ್ನ ... ಜೀವನದುಯ್ಯಾಲೆಯನ್ನ

ಹೂ ಉಯ್ಯಾಲೆ ಕಟ್ಟಿ ನವ ದಂಪತಿಗಳ ತೂಗುವುದ ಕಂಡಿದ್ದೇನೆ
ಗಿರಿಜಾ ಕಲ್ಯಾಣದಲಿ ,ವೆಂಕಟೇಶ್ವರನ ದಂಪತೀ ಉತ್ಸವ ಮೂರ್ತಿಗಳ
ಸುಂದರ ,ಮನ ಮೋಹಕ ಉಯ್ಯಾಲೆಯ ನೋಡಿ ಪರವಶಳಾಗಿದ್ದೀನೆ ,
ಬದುಕಿನ ಧನ್ಯತೆಗಳ ಉಯ್ಯಾಲೆ ಉತ್ಸವದಲಿ ಪುಲಕಿತಳಾಗಿದ್ದೀನೆ

ಜೀವ ಭಯದಲಿ ಕೃತಕ ಉಸಿರಾಟದ ಉಪಕರಣದಲಿ ಜೀವ ಉಯ್ಯಾಲೆ ತೂಗಿ
ದೇಹದ ಒಳಗೂ ಹೊರಗೂ ಉಸಿರು ಕಟ್ಟಿ ಕೊಂಡದ್ದನ್ನ ನೋಡಿ ನಡುಗಿದ್ದೇನೆ
ಆಗಾಗ ಎದೆ ಬಸಿದು ಕಲಿತದ್ದೆಲ್ಲ ಸೇವೆಯೊಳಗೆ ಕರಗಿಸಿ ಅಲ್ಲಿಂದ ಇಳಿಸಿ ಕೊಂಡಿದ್ದೇನೆ
ಜೀವಗಳ ವೈವಿಧ್ಯ ಬದುಕ ಏರಿಳಿತ ಒಮ್ಮೊಮ್ಮೆ ನೋವು ..ಕೆಲವೊಮ್ಮೆ ನಲಿವು ... ಉಯ್ಯಾಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ