ಶುಕ್ರವಾರ, ಮೇ 2, 2014

ಆಸ್ಪತ್ರೆಯ ಜೀವ ಚಕ್ರ 

ನಟನೆಯ ಮೀರಿ ಬದುಕಬೇಕಾಗಿದೆ ಏಕೆಂದರೆ ಇದು 
ದಿನ ನೋವಿನ ಚಿತ್ರ .. ಈ ದೈನ್ಯತೆಗೆ ಒರೆ ಹಚ್ಚಿ ನೋಡಲೇ 
ಬೇಕಿಲ್ಲ .. ರಕ್ತ ಒಸರುವ ಗಾಯಗಳೇ ಸಾಕು ತನ್ನ ಕಥೆಯ 
ಕೇಳಿ ರಕ್ತ ಕಂಬನಿ ಸಿಡಿಸುವುದಕ್ಕೆ .... 

ಆಸರೆಗೆ ಕೈಗಳೇ ನಂಬಿ ನಿ೦ತವರು ಎಲ್ಲೋ ಒಬ್ಬರು 
ಮತ್ತೆಲ್ಲ ಕೋಲುಗಳ ಗಾಲಿಚಕ್ರಗಳ ಹಿಡಿತಕ್ಕೆ ಸಿಕ್ಕವರು 
ಬಾಡಿ ಹೋದ ಕಂಗಳ ತುಂಬಾ ನೀರು ತರಲೂ ಶಕ್ತಿಯಿರದೇ 
ಬಾಯಾರಿಕೆಗೂ ಸಂಕೋಚಿಸಿ ಒಣ ನಾಲಿಗೆಯಲಿ ನಡುಗಿದವರು ...

ಬವಣೆಗೆ ಬಿದ್ದವರಾರಿಗೂ ತಿಳಿದಿರಲಿಲ್ಲ ಹಣೆ ಬರಹ ಒಂದೋ ಎರಡೋ
ಬೆರಳ ಸಮಾಧಿಗೆ ಕಳಿಸಿ ಕುಂಟುತ್ತಾ ಉಳಿದ ಪಾದಕ್ಕೆ ಬಟ್ಟೆಸುತ್ತುತ್ತಾ
ನಾಳಿನ ಚಿಂತೆಗೆಂದೇ ಉಳಿಸಿದ ಮೂರು ಕಾಸೂ ಮುಗಿದು .. ನಿಟ್ಟುಸಿರಿಡುವಾಗ
ಹೃದಯ ಮಾತ್ರವಲ್ಲ ಕಿಡ್ನಿಯಲ್ಲೂ ನಡುಕ ಸಾಕುವ ಜನರ ಕೆಂಗಣ್ಣಿನದ್ದು....

ಜೀವಮಾನವಿಡೀ ದುಡಿದದ್ದ ಕಾಯಿಲೆಯೇ ತಿಂದುಕೊಳ್ಳುವಾಗ ನಾಳಿನ
ಅನ್ನಕ್ಕೆ ಅಂಗೈ ಒಣಗಿ ಚಾಚಬೇಕಾದ... ಬದುಕೇ ಎದೆಯಲ್ಲಿ ದುಸ್ತರವೆನೆಸಿ
ಸಾವಿಗೂ ತುಂಬುಬಾಳಿಗೂ ನಡುವೆ ಸೃಷ್ಟಿಯಾದೀ ದುರ್ಗಮ ಹಾದಿಯ
ಸವೆಸಲಾರದೇ ನಡೆಯುವಾಗ ನಗುಬಾರದೆಯೂ ... ಅಳಲಾರದೆಯೂ ... ಹೀಗೆ ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ