ಮಂಗಳವಾರ, ಅಕ್ಟೋಬರ್ 1, 2013

ಘನಶ್ಯಾಮ ನೀ ಬರಲು

ಘನಶ್ಯಾಮ ನೀ ಬರಲು 

ಮೋಹಕ ನೋಟದಲಿ ಬರಸೆಳೆವ ಘನಶ್ಯಾಮ ನೀ ಬರಲು 
ನಾ ಇರೆನು ನಿನ್ನ ಮಡಿಲಲಿ,ಮುನಿಸಾಗಿದೆ ಮೂಗ ತುದಿಗೆ,
ನೆನೆದ ದಾವಣಿ ತುದಿಯ ಬೆರಳಿಗೆ ಸುತ್ತಿಕೊಂಡು ಕಾದದ್ದು 
ಎಷ್ಟು ದಿನ ..... ಕಾತರದ ಹಲವು ಗಳಿಗೆ ...

ಸುರಿದಿಡಬೇಡ ಮೋಹನಾಸ್ತ್ರದ ಬಲೆಯ, ನನ್ನ ಬಳಸಿ,ಮುದ್ದಿಸಿ
ಒಲ್ಲೆ ಮುತ್ತನೂ,ನಿನ್ನ ಅಲಿಂಗನವನೂ,ನೀಲ ಮೈ ತಂಪನೂ,
ಹೋಗದಿರು ... ಮುನಿಸ ನೋಡುತ ಒರಗಿ ಬಿಟ್ಟಿರು ಕಂಭದ ತುದಿಗೆ
ಹೂ ಹಾರದ ತೋಳಲಿ ನಿನ್ನ ನಾ ನೋಯಿಸುವವರೆಗೆ

ನೋಡು ಕಣ್ಣ ತುದಿಗಿದೆ ನಿನ್ನ ಕಾದ ಕಾಡಿಗೆಯ ಭಾರದ ನೋವು
ಜಾರಿ ಬಾಡಿದ ಜಾಜಿ ಮಲ್ಲಿಗೆಗಳ ಎದೆ ಮಾಲೆ,ಮುಡಿಯ ಮೊಗ್ಗು
ಮುದುಡಿದ ರೇಸಿಮೆಗೆ ಹಾರಿದ ಸುಗಂಧದ ಹನಿಗಳ ಗಾಳಿಯಾಡಿಸುತ್ತಿರುವೆ
ಹಾಗೆ ಮುನಿಸನೂ ನಿನ್ನ ಪ್ರೇಮದೊಳಗೆ ಕರಗಿಸುವ ಮನಸು ಮಾಡುತ್ತಿರುವೆ

ಹುಣ್ಣಿಮೆಗೆ ಕಾಯುವ ಸಮುದ್ರದ ಹುರುಪಿಲ್ಲ ಅದರೂ ಅಮಾವಾಸ್ಯೆಯಲ್ಲ
ನಡುದಿನದೆ ಆವರಿಸು,ಸಮಯಗಳ ಪರಿವಿಲ್ಲ,ಪ್ರೇಮಕ್ಕೇನು ಪರಿಧಿ ಕಟ್ಟಿಲ್ಲ
ಬಿಡಿಸಿಡುತಿರುವೆ ಕಾಲಂದುಗೆ ಸರಪಳಿಗಳ,ಕೆನ್ನೆತಾಗುವ ಚಿನ್ನದ ಗೊಂಚಲ
ಬರಬಹುದಿಲ್ಲಿ ಪಾದ ನೆನೆಸುವೆ ಪನ್ನೀರಿನಿ೦ದ ಇನ್ನೂ ಮುನಿಸಿದೆ, ದೂರದಿಂದ ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ